"ಅವರು ಗುಜರಾತ್ ನಲ್ಲಿ ಮಾಡಿದಂತೆ ನಾನು ಜನರ ರಕ್ತ ಕುಡಿದಿಲ್ಲ "

Update: 2017-02-09 05:51 GMT

ಚಂಡೀಗಢ, ಫೆ.9: ತಮ್ಮ ‘ಕುಡಿಯುವ ಅಭ್ಯಾಸದ’ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ‘‘ಕನಿಷ್ಠ ಅವರು ಗುಜರಾತ್ ನಲ್ಲಿ ಮಾಡಿದಂತೆ ನಾನು ಜನರ ರಕ್ತ ಕುಡಿದಿಲ್ಲ,’’ ಎಂದು ಬಲವಾಗಿಯೇ ಚಾಟಿ ಬೀಸಿದ್ದಾರೆ.

ತಮ್ಮ ವಿರುದ್ಧ ಮೋದಿ ನೀಡಿದ‘‘ವೈಯಕ್ತಿಕ ಹೇಳಿಕೆಗಳು’’ಪಂಜಾಬ್ ಹಾಗೂ ಗೋವಾದಲ್ಲಿ ಎಎಪಿಗೆ ದೊರೆತಿರುವ ಬೆಂಬಲವು ಸಾಂಪ್ರದಾಯಿಕ ಪಕ್ಷಗಳಲ್ಲಿರುವ ಭಯವನ್ನು ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.

‘‘ನಾನೇನು ಕುಡಿಯಬೇಕೆಂದು ಇನ್ನು ಬಿಜೆಪಿ ನನಗೆ ಹೇಳಿಕೊಡುವುದೇ ? ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಾರ್ವಜನಿಕವಾಗಿ ಮದ್ಯ ಸೇವಿಸಿದಾಗ ಹಾಗೂ ಈ ಚಿತ್ರಗಳು ಪ್ರಕಟಗೊಂಡಾಗ ಅವರೇಕೆ ಮಾತನಾಡುತ್ತಿಲ್ಲ ? ಅವರು ರಾಜವಂಶದವರೆಂದೇ ?’’ ಎಂದು ಭಗವಂತ್ ಕಟಕಿಯಾಡಿದ್ದಾರೆ.

‘‘ನನಗೆ ಯಾರಿಂದಲೂ ನಿರಪೇಕ್ಷಣಾ ಪತ್ರ ಬೇಕಾಗಿಲ್ಲ. ನಾನು ಕುಡಿಯುತ್ತೇನೆಂದು ಅವರಲ್ಲಿ ಯಾವ ಆಧಾರವಿದೆ ಇದು ನನ್ನ ವೈಯಕ್ತಿಕ ಜೀವನದ ವಿಚಾರ,’’ ಎಂದು ಅವರು ಹೇಳಿದರು.

ಹಿಂದೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ನಂತರ ಅವರ ಪುತ್ರ ಸುಖಬೀರ್ ಸಿಂಗ್ ಬಾದಲ್, ನಂತರ ಅವರ ಪತ್ನಿ, ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಹಾಗೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್ ನನ್ನನ್ನು ಟೀಕಿಸುತ್ತಿದ್ದರೆ ಇದೀಗ ಪ್ರಧಾನ ಮಂತ್ರಿಯ ಸರದಿ. ಅವರು ಸಾರ್ವಜನಿಕವಾಗಿ ನನ್ನ ಮಾನ ಹಾನಿಗೈಯ್ಯಲು ಯತ್ನಿಸುತ್ತಿದ್ದಾರೆ. ಪಂಜಾಬ್ ಚುನಾವಣೆ ಫಲಿತಾಂಶಗಳಲ್ಲಿನ ಮತಗಳ ಅಂತರ ಜನರು ನನ್ನ ಬಗ್ಗೆ ಏನು ತಿಳಿದುಕೊಂಡಿದ್ದಾರೆಂಬುದನ್ನು ಸ್ಪಷ್ಟ ಪಡಿಸುತ್ತದೆ,’’ ಎಂದು ಅವರು ಹೇಳಿದರು.

‘‘ಮೋದಿಯ ಭಾಷಣ ಸರಪಂಚ ಮಟ್ಟದ್ದಾಗಿತ್ತು. ಅವರು ಪ್ರಜಾಪ್ರಭುತ್ವದ ಮಕ್ಕಾವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆಂದು ಅವರಿಗೆ ಮರೆತು ಹೋಗಿದೆ. ಯಾವುದೋ ಬಾಬಾನ ಸತ್ಸಂಗದಲ್ಲಿದ್ದಂತೆ ನನಗೆ ಅನಿಸಿತು. ಲಕ್ನೌನಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದಂತೆ ಅವರು ನಮ್ಮನ್ನು ಭಾಯಿಯೋ ಔರ್ ಬೆಹನೋ ಎಂದು ಉದ್ದೇಶಿಸಿ ಮಾತನಾಡಿದರು. ಅವರು ಪ್ರಧಾನಿಯೊಬ್ಬರ ಭಾಷಣದ ಮಟ್ಟವನ್ನು ಕೆಳಕ್ಕೆ ತಳ್ಳಿದ್ದಾರೆ,’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News