ಮನಪಾ ಮೇಯರ್-ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನೊಳಗೆ ಪೈಪೋಟಿ
ಮಂಗಳೂರು, ಫೆ.9: ಮಂಗಳೂರು ಮಹಾನಗರ ಪಾಲಿಕೆಯ ನಾಲ್ಕನೆ ಅವಧಿಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಮಾರ್ಚ್‌ನಲ್ಲಿ ನಡೆಯುವ ಚುನಾವಣೆಗೆ ಕಾಂಗ್ರೆಸ್‌ನೊಳಗೆ ತೀವ್ರ ಪೈಪೋಟಿ ಶುರುವಾಗಿದೆ.
ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿಯನ್ನು ನಾಲ್ಕು ತಿಂಗಳ ಹಿಂದೆಯೇ ಸರಕಾರ ಪ್ರಕಟಿಸಿತ್ತು ಇದರ ವಿರುದ್ಧ ಜೆಡಿಎಸ್ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ ಹೈಕೋರ್ಟ್ ವೆುಟ್ಟಲೇರಿದ್ದರು. ವಾದ-ವಿವಾದ ನಡೆದು ಕೊನೆಗೂ ನ್ಯಾಯಮೂರ್ತಿ ರಾಘವೇಂದ್ರ ಚವ್ಹಾಣ್ ನೇತೃತ್ವದ ಏಕಸದಸ್ಯ ಪೀಠವು ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಹಾಲಿ ಮೇಯರ್-ಉಪಮೇಯರ್ ಅವಧಿಯು ಮಾ.11ಕ್ಕೆ ಕೊನೆಗೊಳ್ಳಲಿದೆ. ಹಾಗಾಗಿ ಈ ಸ್ಥಾನಕ್ಕೆ ಮಾ.12ರಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ 14 ಮಹಿಳಾ ಕಾರ್ಪೊರೇಟರ್‌ಗಳಿಗೆ ಸ್ಪರ್ಧಿಸಲು ಅವಕಾಶವಿದ್ದು, ಆ ಪೈಕಿ ಕವಿತಾ ಸನಿಲ್, ಅಪ್ಪಿ, ನಾಗವೇಣಿಯ ಮಧ್ಯೆ ಪೈಪೋಟಿ ಇದೆ. ಉಪಮೇಯರ್ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾದ ಕಾರಣ ಜೆಪ್ಪು ವಾರ್ಡ್‌ನ ಅಪ್ಪಿಗೆ ಮೇಯರ್ ಸ್ಥಾನ ಮರೀಚಿಕೆಯಾಗಬಹುದು. ಮೇಯರ್ ಸ್ಥಾನದ ಮುಂಚೂಣಿಯಲ್ಲಿರುವ ಕವಿತಾ ಸನಿಲ್‌ಗೆ ಬಹುತೇಕ ಕಾರ್ಪೊರೇಟರ್‌ಗಳ ವಿರೋಧವಿದೆ. ಆದರೆ ರಾಜ್ಯ ಹೈಕಮಾಂಡ್‌ನ ಬೆಂಬಲ ಪಡೆದು ಕವಿತಾ ಸನಿಲ್ ಮೇಯರ್ ಆದರೆ ಅಚ್ಚರಿ ಇಲ್ಲ.
ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಅಪ್ಪಿ, ನಾಗವೇಣಿ, ರಜನೀಶ್‌ಗೆ ಅವಕಾಶವಿದೆ. ಮೇಯರ್ ಸ್ಥಾನ ಮಹಿಳೆಗೆ ಮೀಸಲಾದ ಕಾರಣ ಉಪಮೇಯರ್ ಸ್ಥಾನ ಮತ್ತೆ ಮಹಿಳೆಗೆ ಸಿಗುವ ಸಾಧ್ಯತೆ ಇಲ್ಲ. ಹಾಗಾಗಿ ರಜನೀಶ್ ಈ ಸ್ಥಾನಕ್ಕೆ ಆಯ್ಕೆಯಾಗುವುದು ನಿಚ್ಛಳವಾಗಿದೆ.
ಮನಪಾ 60 ಸ್ಥಾನಗಳ ಪೈಕಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2, ಸಿಪಿಎಂ 1, ಎಸ್‌ಡಿಪಿಐ 1 ಹಾಗು ಬಿಜೆಪಿ ಬಂಡಾಯ 1 ಸ್ಥಾನ ಹೊಂದಿದೆ. ಬಿಜೆಪಿಗೆ ಬಹುಮತವಿಲ್ಲದಿದ್ದರೂ ಕೂಡ ಅವಿರೋಧ ಆಯ್ಕೆಯನ್ನು ತಡೆಯುವ ನಿಟ್ಟಿನಲ್ಲಿ ಸ್ಪರ್ಧಿಸಲಿದೆ. 60 ಕಾರ್ಪೊರೇಟರ್‌ಗಳ ಪೈಕಿ ಕಾಂಗ್ರೆಸ್ 14, ಬಿಜೆಪಿ 6, ಜನತಾ ದಳ 1, ಬಿಜೆಪಿ ಬಂಡಾಯ 1 ಹೀಗೆ 22 ಮಂದಿ ಮಹಿಳೆಯರಿದ್ದಾರೆ. ಮೇಯರ್ ಸ್ಥಾನಕ್ಕೆ ಇವರೆಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ.
ಪ್ರಸಕ್ತ ಸಾಲಿನ ಮೊದಲ ಅವಧಿಯ ಮೀಸಲಾತಿಯನ್ನು ಅಬ್ದುಲ್ ಅಝೀಝ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಲೇರಿದ ಕಾರಣ 1 ವರ್ಷ ವಿಳಂಬವಾಗಿತ್ತು. ಕಾರ್ಪೊರೇಟರ್‌ಗಳಾಗಿ ಚುನಾಯಿತರಾಗಿದ್ದರೂ ಕೂಡ ಕೌನ್ಸಿಲ್ ಸಭೆ ನಡೆಸುವಂತಿರಲಿಲ್ಲ. ಬಳಿಕ ಮಹಾಬಲ ಮಾರ್ಲ, ಜೆಸಿಂತಾ ವಿಜಯ ಆಲ್ಫ್ರೆಡ್, ಹರಿನಾಥ್ ಮೇಯರ್ ಆಗಿದ್ದರು.