×
Ad

ಕರ್ನಾಟಕ-ಕೇರಳದ ಪಕ್ಷ-ಸಂಘಟನೆಯಿಂದ ಏಕಕಾಲಕ್ಕೆ ಮುತ್ತಿಗೆ

Update: 2017-02-09 17:47 IST

ಮಂಗಳೂರು, ಫೆ.9: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಗಡಿನಾಡಾದ ತಲಪಾಡಿಯಲ್ಲಿ ಆರಂಭಿಸಲಾದ ಟೋಲ್ ಗೇಟ್ ವಿವಾದ ಮುಂದುವರಿದಿದೆ. ಕರ್ನಾಟಕ ಮತ್ತು ಕೇರಳದ ವಿವಿಧ ಪಕ್ಷ-ಸಂಘಟನೆಯ ಮುಖಂಡರು, ಕಾರ್ಯಕರ್ತರು ಗುರುವಾರ ಟೋಲ್‌ಗೇಟ್ ಮುತ್ತಿಗೆ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರೆ, ಸಮಸ್ಯೆಗೆ ಪರಿಹಾರ ನೀಡಬೇಕಾದ ಹಿರಿಯ ಅಧಿಕಾರಿಗಳು, ಪ್ರಮುಖ ಜನಪ್ರತಿನಿಧಿಗಳು ಇತ್ತ ಸುಲಿಯದ ಕಾರಣ ಸಾರ್ವಜನಿಕರು ತೀವ್ರ ಅಸಮಾಧಾನ ಹೊಂದಿದ್ದಾರೆ.

ಟೋಲ್ ವಸೂಲಾತಿಯನ್ನು ವಿರೋಧಿಸಿ ಕರ್ನಾಟಕ ಮತ್ತು ಕೇರಳದ ಜನರು ಗುರುವಾರ ಸಂಘಟಿತ ಪ್ರತಿಭಟನೆ ನಡೆಸಿದರು. ಅತ್ತ ಕೇರಳದ ಆಕ್ರೋಶಿತರು ‘ಬಿಡೂಗ ಇಲ್ಲ... ಬಿಡೂಗ ಇಲ್ಲಾ’ ಎಂಬ ಘೋಷಣೆ ಮೊಳಗಿಸಿದರೆ ಇತ್ತ ಕರ್ನಾಟಕದ ಜನರು ‘ಬೇಕೇ ಬೇಕು... ನ್ಯಾಯ ಬೇಕು’ ಎನ್ನುವ ಘೋಷಣೆ ಕೂಗಿದರು. ಎರಡೂ ಕಡೆಯಿಂದ ಮುತ್ತಿಗೆ ಹಾಕಿದ ಜನರನ್ನು ತಡೆಯಲು ಕರ್ನಾಟಕ ಪೊಲೀಸರು ಹರಸಾಹಸಪಟ್ಟರು.

ಕೆ.ಸಿ.ರೋಡ್‌ನಿಂದ ಮೆರವಣಿಗೆ ಹೊರಟ ಡೈಮಂಡ್ ವೆಲ್ಫೇರ್ ಅಸೋಸಿಯೇಶನ್, ಗಡಿನಾಡ ರಕ್ಷಣಾ ವೇದಿಕೆ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಿದರೆ, ಅತ್ತ ಶಾಸಕ ಅಬ್ದುರ್ರಝಾಕ್ ನೇತೃತ್ವದ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನೇತೃತ್ವದ ಐಕ್ಯ ಪ್ರಜಾಪ್ರಭುತ್ವ ರಂಗ ಮೆರವಣಿಗೆಯೊಂದಿಗೆ ಆಗಮಿಸಿ ಮುತ್ತಿಗೆ ಹಾಕಿದರು. ಈ ಮಧ್ಯೆ ಗಸ್ತಿನಲ್ಲಿದ್ದ ಕೇರಳ ಪೊಲೀಸರು ತೆರಳಿದ್ದರಿಂದ ಮುತ್ತಿಗೆ ಹಾಕಿದವರನ್ನು ತಡೆಯುವ ಹೊಣೆ ಕರ್ನಾಟಕ ಪೊಲೀಸರ ಪಾಲಿಗೆ ಬಂತು. ಉಳ್ಳಾಲ ಮತ್ತು ಕೊಣಾಜೆ ಪೊಲೀಸರು ಎರಡೂ ರಾಜ್ಯದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮುಂದಾದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ತಳ್ಳಾಟವೂ ನಡೆಯಿತು.

ಅಧಿಕಾರಿಯಿಂದ ಗೊಂದಲಮಯ ಹೇಳಿಕೆ: 
ಕೇರಳದ ಪ್ರತಿಭಟನಾಕಾರರು 1ಗಂಟೆ ಧರಣಿ ನಡೆಸಿ ಸ್ಥಳದಿಂದ ನಿರ್ಗಮಿಸಿದ್ದರೂ ಕರ್ನಾಟಕದ ಪ್ರತಿಭಟನಾಕಾರರು ಕನಿಷ್ಠ ಮೂರು ಗಂಟೆ ಸ್ಥಳದಲ್ಲಿದ್ದರಲ್ಲದೆ, ಟೋಲ್‌ಗೇಟ್‌ಗೆ ಸಂಬಂಧಪಟ್ಟ ಅಧಿಕಾರಿ ಬರಬೇಕು ಎಂದು ಪಟ್ಟುಹಿಡಿದು ರಸ್ತೆ ತಡೆ ನಡೆಸಿದರು.

ಕೊನೆಗೂ ಸ್ಥಳಕ್ಕೆ ಬಂದ ನವಯುಗ ಕಂಪೆನಿಯ ವ್ಯವಸ್ಥಾಪಕ ಭಾನುಪ್ರಕಾಶ್, ಅಧಿಕಾರಿಗಳ ಸಭೆ ಕರೆಯುವವರೆಗೆ ಸ್ಥಳೀಯ 5 ಕಿ.ಮೀ. ವ್ಯಾಪ್ತಿಯ ವಾಹನಿಗರಿಂದ ಸುಂಕ ವಸೂಲು ಮಾಡುವುದಿಲ್ಲ ಎಂದರು. ಇದರಿಂದ ಸಂತಸಗೊಂಡ ಪ್ರತಿಭಟನಾಕಾರರು ವಿಜಯೋತ್ಸವ ಆಚರಿಸಿ, ವಾಹನಿಗರಿಂದ ಸುಂಕ ಪಡೆಯದಂತೆ ತಡೆದರು.

ಆದರೆ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ ಕಂಪೆನಿಯ ವ್ಯವಸ್ಥಾಪಕ ತಾನು ಹಾಗೇನು ಹೇಳಿಲ್ಲ ಎಂದರು. ಈ ವಿಷಯ ತಿಳಿದ ಪ್ರತಿಭಟನಾಕಾರರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಪತ್ರಕರ್ತರ ಮುಂದೆ ತನ್ನ ಮಾತನ್ನು ಪುನರುಚ್ಛರಿಸುವಂತೆ ಮಾಡಿದರು.

ಮಂಗಳೂರು ತಾಪಂ ಸದಸ್ಯ ಅಬೂಬಕರ್ ಸಿದ್ದೀಕ್, ಡೈಮಂಡ್ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಸಂಶುದ್ದೀನ್ ಉಚ್ಚಿಲ್, ಎಸ್‌ಡಿಪಿಐ ಮುಖಂಡ ಹಾರಿಸ್ ಮಲಾರ್, ತಲಪಾಡಿ ಗ್ರಾಪಂ ಸದಸ್ಯ ವೈಭವ್ ಶೆಟ್ಟಿ, ಮಾಜಿ ಸದಸ್ಯ ಗಣೇಶ್ ಶೆಟ್ಟಿ, ಸಲಾಂ ಕೆ.ಸಿ.ರೋಡು, ಶಾಫಿ ಮೀನಾದಿ, ಇಸ್ಮಾಯೀಲ್, ಐಕ್ಯರಂಗದ ಪರವಾಗಿ ನಾಸಿರ್ ಮೊಗ್ರಾಲ್, ಸೈಫುಲ್ಲಾ ತಂಙಳ್, ಎಕೆಎಂ ಅಶ್ರಫ್, ಅಝೀಝ್, ಇಕ್ಬಾಲ್, ಕೇಶವ ಪ್ರಸಾದ್, ಶರೀಫ್ ಅರಿಬೈಲ್ ಉಪಸ್ಥಿತರಿದ್ದರು.

ಎಸಿಪಿಗಳಾದ ಉದಯ ನಾಯಕ್, ಶೃತಿ ಎನ್., ಅಶೋಕ್ ಪಿ., ಗೋಪಿಕೃಷ್ಣ ಸಹಿತ ಮತ್ತಿತರ ಹಿರಿಯ ಅಧಿಕಾರಿಗಳು ಬಂದೋಬಸ್ತ್ ನಡೆಸಿದರು.

ಕೇರಳದಲ್ಲಿ ಹೆದ್ದಾರಿ ಕಾಮಗಾರಿ ಆರಂಭಗೊಳ್ಳದಿದ್ದರೂ ತಲಪಾಡಿ ಗಡಿಯಲ್ಲಿ ಸುಂಕ ನೀಡಬೇಕಿದೆ. ಇದರಿಂದ ಮಂಜೇಶ್ವರ, ಕಾಸರಗೋಡು ಜನರಿಗೆ ತೊಂದರೆಯಾಗಲಿದೆ. ಹಾಗಾಗಿ ಈ ವಿಚಾರದಲ್ಲಿ ಗಡಿ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ಹೇಳಿದ್ದಾರೆ.

ಜೂನ್ ಅಂತ್ಯದೊಳಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಬೇಕು. ಸ್ಥಳೀಯರಿಗೆ ಸಂಪೂರ್ಣ ಸುಂಕ ವಿನಾಯಿತಿ ನೀಡಬೇಕು. ಟೋಲ್‌ನಲ್ಲಿ ರೌಡಿಗಳು ಸುಂಕ ಸಂಗ್ರಹಿಸುತ್ತಿದ್ದು ಅವರನ್ನು ಬದಲಾಯಿಸಬೇಕು ಎಂದು ಗಡಿನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News