ರಾಹುಲ್,ಮೋದಿಯನ್ನು ನಿಮ್ಮ ತಾಯಿ ಏನೆಂದು ಕರೆದಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಿ:ಅಮಿತ್ ಶಾ
ನ್ಯೂ ತೆಹ್ರಿ(ಉತ್ತರಾಖಂಡ್),ಫೆ.9: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ‘ರೇನ್‌ಕೋಟ್ ’ ಟೀಕೆಯ ವಿರುದ್ಧ ಪ್ರತಿಪಕ್ಷಗಳ ಆಕ್ರೋಶದ ನಡುವೆಯೇ ಬಿಜೆಪಿ ಅಧ್ಯಕ್ಷ ಅಮಿತ ಶಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಹಿಂದೆ ಅವರ ತಾಯಿ ಸೋನಿಯಾ ಗಾಂಧಿಯವರು ಮೋದಿ ವಿರುದ್ಧ ಬಳಸಿದ್ದ ಶಬ್ದವನ್ನು ನೆನಪಿಸಿದರು. ಸಿಂಗ್ ವಿರುದ್ಧ ಮೋದಿಯವರು ನುಡಿದಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಸಮರ್ಥಿಸಿ ಕೊಂಡರು.
ಗುರುವಾರ ಇಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಮೋದಿಯವರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಯುಪಿಎ ಆಡಳಿತದ ಅವಧಿಯಲ್ಲಿ ನಡೆದಿದ್ದ 12 ಲ.ಕೋ.ರೂಗಳ ಹಗರಣದ ಹೊಣೆಗಾರಿಕೆ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಸಿಂಗ್ ಅವರದ್ದೇ ಆಗಿದೆ ಎಂದರು.
ಮೋದಿ ಅವರು ಬುಧವಾರ ಸಂಸತ್ತಿನಲ್ಲಿ ಸಿಂಗ್ ಅವರನ್ನು ಪ್ರಸ್ತಾಪಿಸಿ, ಮಾಜಿ ಪ್ರಧಾನಿಯ ಸುತ್ತ ಹಲವಾರು ಹಗರಣಗಳು ನಡೆಯುತ್ತಲೇ ಇದ್ದವು, ಆದರೆ ಅವರ ಸ್ವಂತ ವ್ಯಕ್ತಿತ್ವ ಮಾತ್ರ ಸ್ವಚ್ಛವಾಗಿಯೇ ಇತ್ತು. ಬಾತ್‌ರೂಮಿನಲ್ಲಿ ರೇನ್‌ಕೋಟ್ ಧರಿಸಿಕೊಂಡು ಸ್ನಾನ ಮಾಡುವ ಕಲೆ ಅವರಿಗೆ ಮಾತ್ರ ಗೊತ್ತು ಎಂದು ಛೇಡಿಸಿದ್ದರು. ಇದಕ್ಕಾಗಿ ಪ್ರತಿಪಕ್ಷ ಮೋದಿಯವರ ವಿರುದ್ಧ ಹರಿಹಾಯ್ದಿತ್ತು.
ಸಿಂಗ್ ಕುರಿತು ಇದು ಸರಿಯಾದ ಬಣ್ಣನೆಯಾಗಿದೆ. ಹೀಗಾಗಿ ಕಾಂಗ್ರೆಸ್ ಆಕ್ಷೇಪಿಸುವ ಅಗತ್ಯವಿರಲಿಲ್ಲ ಎಂದ ಶಾ, ಸಾರ್ವಜನಿಕ ವೇದಿಕೆಗಳಲ್ಲಿ ಬಳಸುವ ಭಾಷೆಯ ಘನತೆಯ ಕುರಿತಂತೆ ಹೇಳಬೇಕಾದರೆ ಕೀಳುಭಾಷೆಯಲ್ಲಿ ಕಾಂಗ್ರೆಸ್ ಯಾರಿಗೂ ಕಡಿಮೆಯಿಲ್ಲ ಎಂದರು.
ಹಲವು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮೋದಿ ಯವರನ್ನು ‘ವೌತ್ ಕಾ ಸೌದಾಗರ್(ಸಾವಿನ ವ್ಯಾಪಾರಿ)’ ಎಂದು ಕರೆದಿದ್ದನ್ನು ಶಾ ರಾಹುಲ್‌ಗೆ ನೆನಪಿಸಿದರು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಖರ್ಗೆಯವರು ಇತ್ತೀಚಿಗೆ ಬಳಸಿದ್ದ ಶಬ್ದ ಮತ್ತು ಸರ್ಜಿಕಲ್ ದಾಳಿ ಸಂದರ್ಭದಲ್ಲಿ ಮೋದಿ ವಿರುದ್ಧ ಸ್ವತಃ ರಾಹುಲ್ ಬಳಸಿದ್ದ ‘ಖೂನ್ ಕಿ ದಲ್ಲಾಲಿ ’ಶಬ್ದವನ್ನೂ ಶಾ ನೆನಪಿಸಿದರು.
ಸಿಂಗ್ ಪ್ರಧಾನಿಯಾಗಿದ್ದಾಗ ಅವರು ಹೊರಡಿಸಿದ್ದ ಅಧ್ಯಾದೇಶವನ್ನು ಹರಿದೆಸೆದು ಅವರಿಗೆ ಅಗೌರವ ತೋರಿಸಿದ್ದ ಮೊದಲ ವ್ಯಕ್ತಿ ರಾಹುಲ್ ಎಂದು ಶಾ ಹೇಳಿದರು.
ರೇನ್‌ಕೋಟ್ ಟೀಕೆಗಾಗಿ ಬುಧವಾರ ಮೋದಿಯವರನ್ನು ತರಾಟೆಗೆತ್ತಿಕೊಂಡಿದ್ದ ರಾಹುಲ್,ಇದೊಂದು ದುಃಖಕರ ಮತ್ತು ನಾಚಿಕೆಗೇಡು ಘಟನೆ ಎಂದು ಹೇಳಿದ್ದರು.