ನಾಗರಿಕರಿಂದ ಟೋಲ್ ಫ್ಲಾಝಾಕ್ಕೆ ಮುತ್ತಿಗೆ: ಸ್ಥಳೀಯರಿಗೆ "ಟೋಲ್ ಫ್ರೀ" ಭರವಸೆ

Update: 2017-02-09 12:44 GMT

ಉಳ್ಳಾಲ, ಫೆ.9: ಹೆದ್ದಾರಿಯ ಕಾಮಗಾರಿಯು ಪೂರ್ಣಗೊಳ್ಳದೆ ತಲಪಾಡಿ ಟೋಲ್ ಫ್ಲಾಝಾದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಸುಂಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಗುರುವಾರವೂ ಕೇರಳದ ಯುಡಿವೈಎಫ್ ಸೇರಿದಂತೆ ಕರ್ನಾಟಕದ ಗಡಿ ಪ್ರದೇಶದ ಹಲವು ಸಂಘಟನೆಗಳು ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸುಂಕ ವಸೂಲಾತಿಯನ್ನು ವಿರೋಧಿಸಿ, ಹಲವು ಬೇಡಿಕೆಗಳನ್ನು ಇಟ್ಟು ಸ್ಥಳೀಯ ಸಂಘಟನೆಗಳು ಬುಧವಾರ ಕೂಡಾ ಪ್ರತಿಭಟನೆ ನಡೆಸಿದ್ದು ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದಿದ್ದರು. ಆದರೆ ಟೋಲ್ ಅಧಿಕಾರಿಗಳು ಮಾತ್ರ ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸದೆ ತಮ್ಮ ನಿಲುವನ್ನೇ ಸಮರ್ಥಿಸಿ ಮುಂದುವರೆಸಿದ್ದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ನಾಗರಿಕರು ಗುರುವಾರದಂದು ಮತ್ತೆ ಪ್ರತಿಭಟನೆಯನ್ನು ನಡೆಸಿದರು.

ಗುರುವಾರ ಮಂಜೇಶ್ವರದ ಯುಡಿವೈಎಫ್ ಮತ್ತು ಇತರ ಮಿತ್ರ ಸಂಘಟನೆಗಳು, ಮಂಜೇಶ್ವರ ಶಾಸಕ ಅಬ್ದುಲ್ ರಝಾಕ್ ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಕಾಲ್ನಡಿಗೆ ಜಾಥಾದಲ್ಲಿ ಬಂದು ಟೋಲ್ ಫ್ಲಾಝಾಕ್ಕೆ ನುಗ್ಗಲು ಯತ್ನಿಸಿದ್ದು ನೂರಾರು ಸಂಖ್ಯೆಯಲ್ಲಿ ಗಸ್ತು ಕಾಯುತ್ತಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ,ತಳ್ಳಾಟವೂ ನಡೆಯಿತು.

ಇದೇ ಸಮಯದಲ್ಲಿ ಟೋಲ್ ಫ್ಲಾಝಾದ ಇತ್ತ ಕಡೆ ಕರ್ನಾಟಕ ಗಡಿ ಪ್ರದೇಶದ ಸಂಘಟನೆಗಳಾದ ಎಸ್‌ಡಿಪಿಐ, ಡೈಮಂಡ್ ಅಸೋಷಿಯೇಷನ್, ಗಡಿನಾಡು ರಕ್ಷಣಾ ವೇದಿಕೆ ಸದಸ್ಯರು ಬೃಹತ್ ಸಂಖ್ಯೆಯಲ್ಲಿ ಸೇರಿ ಟೋಲ್ ಫ್ಲಾಝಾಕ್ಕೆ ನುಗ್ಗಲು ಯತ್ನಿಸಿದ್ದು ಪೊಲೀಸರು ಹರಸಾಹಸ ಪಟ್ಟು ಅವರನ್ನು ತಡೆದಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಲು ಮುಂದಾದಾಗ ಉದ್ರಿಕ್ತ ನಾಗರಿಕರು ಟೋಲ್ ಗೇಟ್‌ನ ಅಧಿಕಾರಿಗಳನ್ನು ಸ್ಥಳಕ್ಕೆ ಮಾತುಕತೆಗೆ ಕರೆಸುವಂತೆ ಪಟ್ಟು ಹಿಡಿದರು.

ಸ್ಥಳೀಯರಿಗೆ"ಟೋಲ್ ಫ್ರೀ"ಭರವಸೆ:

ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದು ಸ್ಥಳಕ್ಕೆ ಬಂದ ನವಯುಗ ಗುತ್ತಿಗೆ ಕಂಪನಿಯ ವ್ಯವಸ್ಥಾಪಕ ಭಾನುಪ್ರಕಾಶ್ ಅವರಲ್ಲಿ ಪ್ರತಿಭಟನಾಕಾರರು ಸ್ಥಳೀಯರಿಗೆ ಟೋಲ್ ಫ್ರೀ ಮತ್ತು ಟೋಲ್ ಫ್ಲಾಝಾದಲ್ಲಿ ಕರ್ತವ್ಯಕ್ಕಾಗಿ ನೇಮಿಸಲಾಗಿರುವ ಕ್ರಿಮಿನಲ್ ಹಿನ್ನೆಲೆಯ ಗೂಂಡಾಗಳನ್ನು ಕಿತ್ತು ಅವರ ಸ್ಥಾನಕ್ಕೆ ಮಹಿಳೆಯರನ್ನು ನೇಮಿಸಬೇಕೆಂಬ ಬೇಡಿಕೆಯನ್ನು ಇಟ್ಟರು.ಆರಂಭದಲ್ಲಿ ಅದನ್ನೆಲ್ಲ ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಬೇಕೆಂದು ನಕಾರ ಎತ್ತಿದ ಭಾನುಪ್ರಕಾಶ್ ಪ್ರತಿಭಟನೆ ಮತ್ತೆ ಉಗ್ರ ರೂಪಕ್ಕೆ ತಿರುಗುವುದನ್ನು ಮನಗಂಡು ಟೋಲ್ ಫ್ಲಾಝಾ ಸುತ್ತಮುತ್ತಲಿನ 5ಕಿ.ಮೀ ವ್ಯಾಪ್ತಿಯ ಸ್ಥಳೀಯರಿಗೆ ಸಂಜೆ 6 ಗಂಟೆ ತನಕ ಟೋಲ್ ಫ್ರೀ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News