×
Ad

ರೈಲ್ವೆ ಹಳಿಗೆ ಹಾನಿ:ಸ್ವಲ್ಪದರಲ್ಲಿ ಅಪಾಯದಿಂದ ಪಾರಾದ ದಿಬ್ರುಗಡ ರಾಜಧಾನಿ ಎಕ್ಸಪ್ರೆಸ್

Update: 2017-02-09 18:14 IST

ಪಾಟ್ನಾ,ಫೆ.9: ಹೊಸದಿಲ್ಲಿ-ದಿಬ್ರುಗಡ ರಾಜಧಾನಿ ಎಕ್ಸಪ್ರೆಸ್ ಹಾದು ಹೋಗಲಿದ್ದ ಮಾನ್ಸಿ-ಮಹೇಶಕೂಟ್ ಮಾರ್ಗದಲ್ಲಿ ಹಳಿಗೆ ಹಾನಿಯುಂಟಾಗಿದ್ದನ್ನು ಸಕಾಲದಲ್ಲಿ ಪತ್ತೆ ಹಚ್ಚಲಾಗಿದ್ದು, ಅದರಲ್ಲಿದ್ದ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಇಂದಿಲ್ಲಿ ತಿಳಿಸಿದರು.

ಘಟನೆಯ ಕುರಿತಂತೆ ರೈಲ್ವೆ ಪೊಲೀಸರು ವಿಧ್ವಂಸಕ ಕೃತ್ಯ ಸೇರಿದಂತೆ ಎಲ್ಲ ಕೋನಗಳಿಂದ ತನಿಖೆ ನಡೆಸುತ್ತಿದ್ದಾರಾದರೂ ಪೂರ್ವ ಮಧ್ಯ ರೈಲ್ವೆ (ಇಸಿಆರ್)ಯ ಪ್ರಾಥಮಿಕ ತನಿಖೆಯು, ಪ್ರಚಲಿತ ಚಳಿಯ ವಾತಾವರಣದಿಂದಾಗಿ ಹಳಿಗಳು ಸಂಕುಚಿತಗೊಂಡು ಸಂದು ಬಿಟ್ಟಿರಬಹುದು ಎಂದು ಬೆಟ್ಟು ಮಾಡಿದೆ ಎಂದು ಇಸಿಆರ್‌ನ ಮುಖ್ಯ ಪಿಆರ್‌ಒ ಅರವಿಂದ ಕುಮಾರ್ ರಜಕ್ ತಿಳಿಸಿದರು.

 ಖಗರಿಯಾ ಜಿಲ್ಲೆಯ ಭಕ್ತಿಯಾರಪುರ ನಿವಾಸಿಗಳು ಬುಧವಾರ ಬೆಳಿಗ್ಗೆ 6:50ರ ಸುಮಾರಿಗೆ ಮಾನ್ಸಿ-ಕತಿಹಾರ್ ವಿಭಾಗದಲ್ಲಿ ಹಳಿಗಳ ಜೋಡಣೆಯು ಸಂದು ಬಿಟ್ಟಿರುವದನ್ನು ಕಂಡು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೊಸದಿಲ್ಲಿ-ದಿಬ್ರುಗಡ ರಾಜಧಾನಿ ಎಕ್ಸಪ್ರೆಸ್ ರೈಲನ್ನು ಸುಮಾರು 32 ನಿಮಿಷಗಳ ಕಾಲ ಮಾನ್ಸಿ ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಗಿತ್ತು. ಹಳಿ ದುರಸ್ತಿಯ ಬಳಿಕ 7:35ಕ್ಕೆ ರೈಲು ತನ್ನ ಪ್ರಯಾಣವನ್ನು ಮುಂದುವರಿಸಿತು ಎಂದರು.

ಇತ್ತೀಚಿಗೆ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಮೂವರು ಐಎಸ್‌ಐ ಶಂಕಿತರನ್ನು ಬಂಧಿಸಿದ ನಂತರ ವಿಧ್ವಂಸಕ ಕೃತ್ಯದ ಸಾಧ್ಯತೆಯ ದೃಷ್ಟಿಯಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News