ದಲಿತರೆಂಬ ಕಾರಣಕ್ಕೆ ತಾ.ಪಂ. ಅಧ್ಯಕ್ಷರನ್ನು ಅವಮಾನಿಸುತ್ತಿರುವ ಸ್ಥಾಯಿ ಸಮಿತಿ ಅಧ್ಯಕ್ಷರು
ಸುಳ್ಯ, ಫೆ. 9: ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರನ್ನು ದಲಿತರು ಎನ್ನುವ ಕಾರಣಕ್ಕೆ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಅವಮಾನಿಸುತ್ತಿದ್ದಾರೆ. ಬಿಜೆಪಿ ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕ್ಷಮೆ ಯಾಚನೆ ಮಾಡಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನ್ನಾಡಿದ ಅವರು, ತಾಲೂಕು ಪಂಚಾಯತ್‌ನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸೀಮಿತ ಅಧಿಕಾರವಿದೆ. ಆದರೆ ಸಭೆಗಳಲ್ಲಿ ಬಹುಪಾಲು ಅವರೇ ಮಾತನಾಡುತ್ತಾರೆ. ಅಧ್ಯಕ್ಷರನ್ನು ಅವರು ದಲಿತರು ಎನ್ನುವ ಕಾರಣಕ್ಕೆ ರೂಲಿಂಗ್ ನೀಡಲು ಅವಕಾಶ ನೀಡುವುದಿಲ್ಲ. ಇದು ದಲಿತ ವರ್ಗಕ್ಕೆ ಮಾಡುವ ಅಪಮಾನ. ಈ ಬಗ್ಗೆ ಬಿಜೆಪಿಯವರು ಸ್ಪಷ್ಟನೆ ನೀಡಬೇಕು. ಇಲ್ಲದೆ ಹೋದರೆ ಕ್ಷಮೆ ಯಾಚನೆ ಮಾಡಬೇಕು. ಇದಾಗದಿದ್ದರೆ ಈ ಕುರಿತಂತೆ ನಾವು ಧ್ವನಿ ಎತ್ತುತ್ತೇವೆ ಎಂದು ಹೇಳಿದರು.
ರಾಜ್ಯ ಸರಕಾರ ಹಲವು ಒಳ್ಳೆಯ ಯೋಜನೆ ಜಾರಿಗೆ ತರುತ್ತಿದ್ದರೆ, ಕೇಂದ್ರ ಸರಕಾರ ಜನರಿಗೆ ತೊಂದರೆಯಾಗುವ ನಿರ್ಧಾರಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯ ಸರಕಾರ ಅರಣ್ಯದ ಅಂಚಿನಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕಾಡು ಉಳಿಸಿ, ಪರಿಸರ ಬೆಳೆಸಿ ಯೋಜನೆಯ ಅಂಗವಾಗಿ ಉಚಿತವಾಗಿ ಗ್ಯಾಸ್ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದು, ಅದರಂತೆ ಪಂಜ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 72, ಸುಬ್ರಹ್ಮಣ್ಯದಲ್ಲಿ 184 ಮತ್ತು ಸುಳ್ಯದಲ್ಲಿ 170 ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಗುವುದು. ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಲ್ಲಿ ಯೂನಿಟ್‌ಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು, 8 ಕೆ.ಜಿ ಗೆ ಏರಿಸಿರುವುದು ಸ್ವಾಗತಾರ್ಹ, ಅಲ್ಲದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ವಕೀಲರಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ. ರಾಜ್ಯ ಸರಕಾರ ಇಂತಹ ಒಳ್ಳೆಯ ಯೋಜನೆ ಜಾರಿಗೆ ತರುತ್ತಿದ್ದರೆ, ಕೇಂದ್ರ ಸರಕಾರ ಜನರಿಗೆ ತೊಂದರೆಯಾಗುವ ನಿರ್ಧಾರಗಳನ್ನು ಜಾರಿಗೆ ತರುತ್ತಿದೆ. ಇನ್ನಾದರೂ ಯುವ ಸಮೂಹ ಮೋದಿಯವರ ಜನವಿರೋಧಿ ಧೋರಣೆಯ ಕುರಿತು ಅತ್ಮಾವಲೋಕನ ಮಾಡಿಕೊಳ್ಳುವುದು ಒಳಿತು ಎಂದು ಹೇಳಿದರು.
ನೋಟ್ ಬ್ಯಾನ್ ಆದ ಬಳಿಕ ರಾಜ್ಯದ ಆದಾಯದಲ್ಲಿ ಕುಂಠಿತವಗಿದೆ ಎಂದು ವಿ.ಎಸ್ ಉಗ್ರಪ್ಪ ಸದನದಲ್ಲಿ ಹೇಳಿದ್ದಾರೆ. ಸುಳ್ಯ ತಾಲೂಕಿನ ಉದಾಹರಣೆ ಇದಕ್ಕೆ ಪೂರಕವಾಗಿದೆ. 2015 ನವೆಂಬರ್ 8ರಿಂದ ಫೆಬ್ರವರಿ 8ರವೆರೆಗೆ ಸುಳ್ಯದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾವಿರದ ನೂರ 82 ದಾಖಲೆಗಳು ವಿಲೇವಾರಿಯಾಗಿತ್ತು. ಮುದ್ರಾಂಕ ಶುಲ್ಕದಲ್ಲಿ 84,64,960 ರೂ ಸಂಗ್ರಹವಾಗಿತ್ತು. ಆದರೆ 2016 ನವೆಂಬರ್ 8 ರಿಂದ 2017 ಫಬ್ರವರಿ 8 ರೆವೆಗೆ ಕೇವಲ 865 ದಾಖಲೆಗಳು ವಿಲೇವಾರಿಯಾಗಿ 43,96,541 ರೂ ಮುದ್ರಾಂಕ ಶುಲ್ಕ ಸಂಗ್ರಹವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ್, ತಾ.ಪಂ. ಸದಸ್ಯರಾದ ಅಶೋಕ್ ನೆಕ್ರಾಜೆ, ತೀರ್ಥರಾಮ ಜಾಲ್ಸೂರು, ನಗರ ಪಂಚಾಯತ್ ಸದಸ್ಯ ಗೋಕುಲ್ ದಾಸ್ , ಕಾಂಗ್ರೆಸ್ ನಾಯಕ ನಂದರಾಜ್ ಸಂಕೇಶ ಪತ್ರಿಕಾಗೋಷ್ಠಿಯಲ್ಲಿದ್ದರು.