×
Ad

ನಗದು ವಹಿವಾಟಿನ ಮೇಲೆ ತೆರಿಗೆ ವಿಧಿಸಲು ಇನ್ನೂ ನಿರ್ಧರಿಸಿಲ್ಲ:ದಾಸ್

Update: 2017-02-09 19:00 IST

ಹೊಸದಿಲ್ಲಿ,ಫೆ.9: ಮುಖ್ಯಮಂತ್ರಿಗಳ ಉನ್ನತಾಧಿಕಾರ ಸಮಿತಿಯು ಸೂಚಿಸಿರುವಂತೆ 50,000 ರೂ.ಮತ್ತು ಹೆಚ್ಚಿನ ನಗದು ವ್ಯವಹಾರಗಳ ಮೇಲೆ ಬ್ಯಾಂಕಿಂಗ್ ನಗದು ವಹಿವಾಟು ತೆರಿಗೆ(ಬಿಸಿಟಿಟಿ)ಯನ್ನು ವಿಧಿಸುವ ಬಗ್ಗೆ ಸರಕಾರವು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಸಮಿತಿಯ ವರದಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಸೂಕ್ತ ನಿರ್ಧಾರವೊಂದನ್ನು ಸರಕಾರವು ತೆಗೆದುಕೊಳ್ಳಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ಗುರುವಾರ ಇಲ್ಲಿ ತಿಳಿಸಿದರು.

ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ.7ಕ್ಕೂ ಅಧಿಕ ಬೆಳವಣಿಗೆಯನ್ನು ದಾಖಲಿಸುವ ಆಶಯವನ್ನು ವ್ಯಕ್ತಪಡಿಸಿದ ಅವರು, ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡುವುದಾಗಿ ಎರಡು ವರ್ಷಗಳ ಹಿಂದೆ ವಿತ್ತಸಚಿವರು ಪ್ರಕಟಿಸಿದ್ದರು. ಆರ್ಥಿಕ ನಿರ್ಬಂಧಗಳಿಂದಾಗಿ ಕಾರ್ಪೊರೇಟ್ ತೆರಿಗೆಯನ್ನು ರಾತ್ರಿ ಬೆಳಗಾಗುವುದರಲ್ಲಿ ಶೇ.25ಕ್ಕೆ ತಗ್ಗಿಸಲು ಸಾಧ್ಯವಿಲ್ಲ. ಆದರೆ ಹಂತಹಂತವಾಗಿ ಮಾಡಲಾಗುವುದು ಎಂದರು.

ಅಸೋಚಾಮ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದ ಬಗ್ಗೆ ಹೇಳುವುದಾದರೆ, ವಿಶ್ವದ ಕೆಲವು ಭಾಗಗಳಲ್ಲಿ ಕೆಲ ಅನಿಶ್ಚಿತತೆಯ ಮಾತುಗಳು ಕೇಳಿಬರುತ್ತಿದ್ದರೂ ಬೆಳವಣಿಗೆ ಅತ್ಯಂತ ಧನಾತ್ಮಕವಾಗಿರಲಿದೆಯೆಂದು ತಾನು ಭಾವಿಸಿದ್ದೇನೆ. ಸರಕಾರವು ತೆಗೆದುಕೊಂಡಿರುವ ವಿವಿಧ ನೀತಿ ಕ್ರಮಗಳ ಹಿನ್ನೆಲೆಯಲ್ಲಿ ಶೇ.7ಕ್ಕೂ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News