×
Ad

ಫೆ.11ರಂದು ಯೆನೆಪೊಯ ವಿವಿಗೆ ಸಿಎನ್‌ಆರ್ ರಾವ್ ಭೇಟಿ

Update: 2017-02-09 19:21 IST

ಮಂಗಳೂರು, ಫೆ.9: ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದ ವತಿಯಿಂದ ಫೆ.11ರಂದು ನಡೆಯುವ ‘ಯೆನೆಪೊಯ ಫೌಂಡೇಶನ್ ಉಪನ್ಯಾಸ ಮಾಲಿಕೆ’ಯ ಉದ್ಘಾಟನೆ ಮತ್ತು ‘ಯೆನೆಪೊಯ ನರ್ಕೊಟಿಕ್ಸ್ ಎಜುಕೇಶನಲ್ ಫೌಂಡೇಶನ್ ಆಫ್ ಇಂಡಿಯಾ’ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾರತರತ್ನ ಪ್ರೊ. ಸಿ.ಎನ್. ಆರ್. ರಾವ್ ಭಾಗವಹಿಸಲಿದ್ದಾರೆ ಎಂದು ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಜಿ.ಶ್ರೀಕುಮಾರ್ ಮೆನನ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಿ.ಎನ್.ಆರ್. ರಾವ್ ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಅಪ್ರತಿಮ ಸೇವೆಯನ್ನು ಪರಿಗಣಿಸಿ ಯೆನೆಪೊಯ ವಿಶ್ವವಿದ್ಯಾನಿಲಯದ ವತಿಯಿಂದ ‘ಡಾಕ್ಟರ್ ಆಫ್ ಸೈನ್ಸ್’ ಎಂಬ ಪದವಿಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗಾಗಿ ಪ್ರಾರಂಭಿಸಲಾಗುವ ಯೆನೆಪೊಯ ಫೌಂಡೇಶನ್ ಉಪನ್ಯಾಸ ಮಾಲಿಕೆಯನ್ನು ಪ್ರೊ. ಸಿಎನ್‌ಆರ್ ರಾವ್ ಉದ್ಘಾಟನಾ ಉಪನ್ಯಾಸ ನೀಡಲಿದ್ದಾರೆ. ಮುಂದಿನ ವರ್ಷಗಳಿಂದ ವಿಜ್ಞಾನಕ್ಕೆ ಕೊಡುಗೆ ನೀಡಿದ ಪರಿಣಿತರನ್ನು ಆಹ್ವಾನಿಸಿ ಈ ಮಾಲಿಕೆಯಲ್ಲಿ ಉಪನ್ಯಾಸವನ್ನು ನೀಡುವ ರೂಢಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಅಮಲು ಮುಕ್ತ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯವು ಸ್ಥಾಪಿಸಿದ ಯೆನೆಪೊಯ ನರ್ಕೊಟಿಕ್ಸ್ ಎಜುಕೇಶನಲ್ ಫೌಂಡೇಶನ್ ಆಫ್ ಇಂಡಿಯಾ (ynefi.org) ನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಅಶಿಕ್ಷಿತರಲ್ಲಿ ಅಮಲು ಪದಾರ್ಥ ಸೇವನೆಯ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಇದರ ಭಾಗವಾಗಿ ‘ಮಿಶನ್ ಏಂಜೆಲ್ ಡಸ್ಟ್’ ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಅಮಲು ಮುಕ್ತಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಅರುಣ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News