ಮಂಗಳೂರು: ಫೆ.11, 12ರಂದು ಜೇನುಮೇಳ, ಸಾವಯವ ಮೇಳ
ಮಂಗಳೂರು, ಫೆ.9: ತೋಟಗಾರಿಕೆ ಬೆಳೆಗಳಲ್ಲಿ ಪರಾಗಸ್ಪರ್ಶ ಮೂಲಕ ಇಳುವರಿ ಹೆಚ್ಚು ಮಾಡಲು, ಜೇನು ಸಾಕಣೆ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಲು ಜೇನು ಸಾಕಣೆ, ಜೇನು ಆಧಾರಿತ ಚಟುವಟಿಕೆಗಳಿಗೆ ಉತ್ತೇಜನ ನೀಡಲು, ಜೇನಿನ ಬಳಕೆ ಹೆಚ್ಚಿಸಲು ಹಾಗೂ ಜೇನಿನ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಲು ಜೇನುಮೇಳ ಮತ್ತು ಸಾವಯವ ಮೇಳವನ್ನು ಜಿಪಂ, ತೋಟಗಾರಿಕೆ ಇಲಾಖೆ ವತಿಯಿಂದ ಕದ್ರಿ ಉದ್ಯಾನವನದಲ್ಲಿ ಫೆ.11,12ರಂದು ಏರ್ಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೀಶ್ ತಿಳಿಸಿದರು.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸಂಸದ ನಳಿನ್‌ಕುಮಾರ್ ಕಟೀಲ್ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಿದ್ದು, ಶಾಸಕ ಜೆ.ಆರ್. ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಳಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಇದರ ಉಪಯೋಗವನ್ನು ಸಾರ್ವಜನಿಕರು ಹಾಗೂ ರೈತರು ಪಡೆಯಲು ಮನವಿ ಮಾಡಿದರು.
ಜೇನು ಸಾಕಣೆಗೆ ಸಂಬಂಧಿಸಿದ ವಿವಿಧ ಪರಿಕರಗಳ ಪ್ರದರ್ಶನ, ಜೀವಂತ ಜೇನು ಕುಟುಂಬ ಪ್ರದರ್ಶನ, ಜೇನಿನ ವಿವಿಧ ಪ್ರಭೇದಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಆಯುಷ್ ಇಲಾಖೆಯಿಂದ ಜೇನಿನ ಉಪಯೋಗಗಳು ಹಾಗೂ ಔಷಧೀಯ ಗುಣಗಳ ಕುರಿತು ಮಾಹಿತಿ ನೀಡಲಿದ್ದಾರೆ. ಎಸ್‌ಡಿಎಂ ನಾಚ್ಯುರೋಪತಿ ಕಾಲೇಜು ವಿದ್ಯಾರ್ಥಿಗಳಿಂದ ಜೇನಿನ ವಿವಿಧ ಪೇಯಗಳ ತಯಾರಿ ಹಾಗೂ ಮಾರಾಟ ನಡೆಯಲಿದೆ ಎಂದರು.
ಸಾವಯವ ಕೃಷಿಕ ಗ್ರಾಹಕರ ಬಳಗ ಮಂಗಳೂರು ಇವರಿಂದ ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ವಿವಿಧ ತರಕಾರಿ ಬೆಳೆಗಳ ಬೀಜಗಳ ಮಾರಾಟವಿದೆ. ಸಾವಯವ ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಫೆ.11ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ತಿಳಿಸಿದರು.
ಸುಮಾರು 500 ರೈತರು ಸಾವಯವ ಕೃಷಿಯ ಉಪಯೋಗದ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಜೇನು ಮೇಳದಲ್ಲಿ 40 ಮಳಿಗೆಗಳು ತೆರೆಯಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ, ಜೇನು ಅಭಿವೃದ್ಧಿ ತಜ್ಞ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು.