ಭಟ್ಕಳದ ಪ್ರತಿಭೆ ಪ್ರಸನ್ನ ಪ್ರಭುಗೆ ಕೊಂಕಣಿ ಯುವ ಪುರಸ್ಕಾರ
ಭಟ್ಕಳ, ಫೆ. 9: ಸಂಗೀತ, ಜಾದು, ಕಲೆ, ನಿರೂಪಣೆ ವಿವಿಧ ಪ್ರತಿಭೆಗಳನ್ನು ಹೊಂದಿರುವ ಭಟ್ಕಳದ ಝೇಂಕಾರ್ ಮೆಲೋಡಿಸ್ ಸಂಸ್ಥೆಯ ಪ್ರಸನ್ನ ಪ್ರಭುಗೆ 2017 ಕೊಂಕಣಿ ಯುವ ಪುರಸ್ಕಾರ ಲಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಾರಥ್ಯದಲ್ಲಿ ಮಂಗಳೂರಿನ ಪುರಭವನದಲ್ಲಿ ಫೆಬ್ರವರಿ 10,11 ಮತ್ತು 12 3 ದಿನಗಳ ಕಾಲ ಕೊಂಕಣಿ ಲೋಕೋತ್ಸವ-2017 ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಯುವಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದ್ದು ಭಟ್ಕಳದ ಯುವ ಪ್ರತಿಭೆಗೆ ಕೊಂಕಣಿ ಯುವ ಪುರಸ್ಕಾರ ದೊರೆತಿದ್ದು ಉತ್ತರಕನ್ನ ಜಿಲ್ಲೆಗೆ ಸಂಧ ಹೆಮ್ಮೆಯಾಗಿದೆ.
ಸಂಗೀತ, ನೃತ ಮತ್ತು ವಿವಿಧ ಶಾಸ್ತ್ರೀಯ ಲಲಿತ ಕಲೆಗಳ ಅಭಿವೃದ್ಧಿಗೆ ತಮ್ಮ ಝೇಂಕಾರ ಸಂಸ್ಥೆಯ ಮೂಲಕ ಶ್ರಮಿಸುತ್ತಿರುವ ನಮ್ಮ ಜಿಲ್ಲೆಯ ಪ್ರಭುದ್ದ ಕಲಾವಿದ, ಜಾದುಗಾರ, ನಿರೂಪಕ ಪ್ರಶನ್ನ ಪ್ರಭು ಸುರೇಶ ಪ್ರಭು ಹಾಗೂ ಶ್ರೀಮತಿ ನಳಿನಿ ಪ್ರಭು ದಂತಿಗಳ ದ್ವಿತೀಯ ಪುತ್ರರಾಗಿದ್ದಾರೆ.
ಸತತ 20 ವರ್ಷಗಳಿಂದ ಜಾದೂ ಕ್ಷೇತ್ರದಲ್ಲಿ 2000 ಕ್ಕೂ ಹೆಚ್ಚು ಜಾದೂ ಕಾರ್ಯಕ್ರಮಗಳನ್ನು ನೀಡಿದ್ದು, ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಕೇರಳದಲ್ಲಿ ಕಾರ್ಯಕ್ರಮಗಳನ್ನು ನೀಡಿ ಪ್ರೇಕ್ಷಕರನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದ ಕೀರ್ತಿ ಇವರದ್ದು. ಕಳೆದ ವರ್ಷ ವಿದೇಶಕ್ಕೆ ತೆರಳಿ ಬ್ಯಾಂಕಾಕ್‌ನಲ್ಲಿ ಜಾದೂ ಕಾರ್ಯಕ್ರಮ ನೀಡುವ ಮೂಲಕ ಅಂತರ್ ರಾಷ್ಟ್ರೀಯ ಜಾದೂಗಾರನಾಗಿ ಖ್ಯಾತಿಯನ್ನು ಹೊಂದಿದ್ದಾರೆ. ಶಾಸ್ತ್ರೀಯ ನೃತ್ಯ, ಕರ್ನಾಟಕ ಸಂಗೀತ ಹಾಗೂ ಚಿತ್ರಕಲೆಯನ್ನು ಉಳಿಸಿ ಬೆಳೆಸಲು ಝೇಂಕಾರ್ ಮೆಲೋಡಿಸ್ ಆರ್ಟ್ಸ್ ಅಸೋಸಿಯೇಶನ್ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ನೂರಾರು ಬಡ ವಿದ್ಯಾರ್ಥಿಗಳಿಗೆ ಕಳೆದ 10 ವರ್ಷಗಳಿಂದ ಉಚಿತವಾಗಿ ಕಲಾ ತರಬೇತಿಯನ್ನು ನೀಡುವ ಮೂಲಕ ಸನ್ಮಾನಾರ್ಹ ಸಾಧನೆಯನ್ನು ಮಾಡಿದ್ದಾರೆ. ತಬಲಾ ವಾದಕರು, ಉತ್ತಮ ನಿರೂಪಕರು, ಜಾದೂಗಾರರು ಆಗಿರುವ ಇವರು ತಮ್ಮ ಝೇಂಕಾರ್ ಮೆಲೋಡಿಸ್ ರಸಮಂಜರಿ ತಂಡದ ಮೂಲಕ ದಕ್ಷಿಣ ಭಾರತಾದ್ಯಂತ ಸಹಸ್ರಾರು ಕಾರ್ಯಕ್ರಮಗಳನ್ನು ನೀಡಿ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರೀಯವಾಗಿ ಗುರುತಿಸಿಕೊಂಡು ಕೊಂಕಣಿ ಭಾಷೆಯ ಬಹುಮುಖ ಪ್ರತಿಭೆಯ ಕಲಾವಿದರಾದ ಇವರಿಗೆ ಹಲವು ಖಾಸಗಿ ಸಂಘ ಸಂಸ್ಥೆಗಳು ಪ್ರಸ್ತಿ ಸನ್ಮಾನಗಳೊಂದಿಗೆ ಗೌರವಿಸಿದೆ.