ಸಿಎಂ ಆಗಿ ವಿವೇಚನೆಯಿಂದ ಪನ್ನೀರ್ ಕಾರ್ಯ ನಿರ್ವಹಣೆ: ತ.ನಾ.ಬಿಜೆಪಿ
ಚೆನ್ನೈ,ಫೆ.9: ತಮಿಳುನಾಡು ಮುಖ್ಯಮಂತ್ರಿಯಾಗಿ ಒ.ಪನ್ನೀರಸೆಲ್ವಂ ಅವರು ಕಳೆದ ಎರಡು ತಿಂಗಳುಗಳಲ್ಲಿ ವಿವೇಚನೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ಗುರುವಾರ ಇಲ್ಲಿ ಹೇಳಿದ ಬಿಜೆಪಿ ರಾಜ್ಯ ಘಟಕವು, ಎಡಿಎಂಕೆ ನಾಯಕತ್ವವು ಅಧಿಕಾರವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ರಾಜ್ಯದಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳಿಸೈ ಸೌಂದರ್‌ರಾಜನ್ ಅವರು, ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರು ತಮಿಳುನಾಡಿಗೆ ಮೊದಲೇ ಭೇಟಿ ನಿಡದೆ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ ಮತ್ತು ತನ್ಮೂಲಕ ತಾನು ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಯಾರದೇ ಪ್ರಭಾವಕ್ಕೆ ಒಳಗಾಗಿಲ್ಲ ಎಂದು ಹೇಳಿದರು.
ಪನ್ನೀರಸೆಲ್ವಂ ಅವರು ಕಳೆದೆರಡು ತಿಂಗಳುಗಳಲ್ಲಿ ವಾರ್ದಾ ಚಂಡಮಾರುತ, ಜಲ್ಲಿಕಟ್ಟು ಪ್ರತಿಭಟನೆಯಂತಹ ಸವಾಲುಗಳನ್ನು ಸೂಕ್ತವಾಗಿ ನಿರ್ವಹಿಸಿದ್ದಾರೆ, ತನ್ನ ವಿವೇಚನೆಯನ್ನು ಪ್ರದರ್ಶಿಸಿದ್ದಾರೆ. ಅವರನ್ನು ಬದಲಿಸುವ ಅವಸರವೇನಿದೆ ಎಂದು ರಾಜ್ಯದ ಪಕ್ಷವಾಗಿ ಬಿಜೆಪಿಯು ಪ್ರಶ್ನಿಸುತ್ತದೆ ಎಂದರು.
ಜನರು ಪನ್ನೀರಸೆಲ್ವಂ ಅವರನ್ನು ಬೆಂಬಲಿಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳು ಮಾತ್ರ ಮುಖ್ಯವಾಗಿವೆ. ಬಿಜೆಪಿಯು ರಾಜ್ಯದ ಜನರೊಂದಿಗಿದೆ ಎಂದು ಅವರು ತಿಳಿಸಿದರು.