ಉಡುಪಿ: ಅಮರಣಾಂತ ಉಪವಾಸ ಮೂರನೇ ದಿನಕ್ಕೆ
ಉಡುಪಿ, ಫೆ.9: ಉಡುಪಿ ಜಿಲ್ಲೆಯಲ್ಲಿನ ಮರಳು ಸಮಸ್ಯೆಗೆ ಪರಿಹಾರ, ಕಾರ್ಮಿಕರ ಹಿತ ರಕ್ಷಣೆ ಮತ್ತು ಮೂಲಭೂತ ಹಕ್ಕುಗಳಿಗೆ ಆಗ್ರಹಿಸಿ ಕರ್ನಾಟಕ ಕಾರ್ಮಿಕರ ವೇದಿಕೆಯು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಉಡುಪಿ ಸರ್ವಿಸ್ ಬಸ್‌ನಿಲ್ದಾಣದ ಕ್ಲಾಕ್ ಟವರ್ ಎದುರು ಬುಧವಾರದಿಂದ ಪ್ರಾರಂಭಿಸಿದ್ದ ಅಮರಣಾಂತರ ಉಪವಾಸ ಸತ್ಯಾಗ್ರಹ ಇಂದು ಎರಡನೇ ದಿನವನ್ನು ಪೂರ್ಣಗೊಳಿಸಿದೆ.
ಒಟ್ಟು ನಾಲ್ಕು ಮಂದಿ ಬುಧವಾರ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ ನಡೆಸುತಿದ್ದು, ಉಳಿದವರು ಅವರಿಗೆ ಸರದಿ ಪ್ರಕಾರ ಬೆಂಬಲ ನೀಡುತಿದ್ದಾರೆ. ಇವರಲ್ಲಿ ವೇದಿಕೆಯ ಕಾರ್ಯದರ್ಶಿ ಸುಧಾಕರ ನಾಯ್ಕಾ ಇಂದು ತೀವ್ರವಾಗಿ ಅಸ್ವಸ್ಥಗೊಂಡು ತಲೆತಿರುಗಿ ಬಿದ್ದಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಅವರಿಗೆ ಗ್ಲುಕೋಸ್ ನೀಡಲಾಗುತಿದ್ದರೂ ಅವರು ತಮ್ಮ ಉಪವಾಸ ವ್ರತವನ್ನು ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.
ಉಳಿದಂತೆ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಹಾಗೂ ನಿಲೇಶ್ ಅವರ ಸ್ಥಿತಿ ಗಂಭೀರವಾಗಿದೆ. ಇಬ್ಬರೂ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಚಂದ್ರ ಪೂಜಾರಿ ಅವರು ಸಹ ತೀವ್ರವಾಗಿ ಬಳಲಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾಡಳಿತ ಈ ಅಮರಣಾಂತ ಉಪವಾಸವನ್ನು ಕಡೆಗಣಿಸಿದ್ದು, ಉಪವಾಸ ನಿರತರ ವೈದ್ಯಕೀಯ ಪರೀಕ್ಷೆಗೂ ಕಾಳಜಿ ತೋರಿಸಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತಿರುವ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಅವರು ಮುಷ್ಕರ ನಿರತರ ಬೇಡಿಕೆಯನ್ನು ಜಿಲ್ಲಾಡಳಿತ ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಇಂದು ಬೆಳಗ್ಗೆ ಟಯರ್‌ಗೆ ಬೆಂಕಿ ಕೊಟ್ಟು ಪ್ರತಿಭಟಿಸಿದರು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಬೆಂಕಿಯನ್ನು ಆರಿಸಿದರು.
ಜಯಕರ್ನಾಟಕದ ಜಿಲ್ಲಾ ಸಂಚಾಲಕ ಜನನಿ ದಿವಾಕರ ಶೆಟ್ಟಿ ಅವರು ತಮ್ಮ ಸಂಗಡಿಗರೊಂದಿಗೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ವಿವಿಧ ಸಂಘಟನೆಗಳು ಮುಷ್ಕರನಿರತರಿಗೆ ಬೆಂಬಲವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಾಳೆ ಇನ್ನಷ್ಟು ಸಂಘಟನೆಗಳು ಬೆಂಬಲ ನೀಡಲಿವೆ ಎಂದು ರವಿ ಶೆಟ್ಟಿ ತಿಳಿಸಿದರು.
ಮುಷ್ಕರನಿರತರ ಬೇಡಿಕೆಗಳ ಕುರಿತಂತೆ ಇಂದು ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ನಾಗೇಂದ್ರ ನೇತೃತ್ವದಲ್ಲಿ ನಿಯೋಗವೊಂದು ಜಿಲ್ಲಾಧಿಕಾರಿಗಳ ಬಳಿ ತೆರಳಿ ಮನವಿ ಅರ್ಪಿಸಿದರೂ, ಅವರು ಸ್ಪಂಧಿಸುವ ಕೆಲಸ ಮಾಡಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಪ್ರತಿಭಟನೆ ಬೇಡಿಕೆಗೆ ಜಿಲ್ಲಾಡಳಿತ ಪೂರಕವಾಗಿ ಸ್ಪಂದಿಸುವವರೆಗೂ ಮುಂದು ವರಿಯುವುದು ಎಂದು ರವಿ ಶೆಟ್ಟಿ ತಿಳಿಸಿದ್ದಾರೆ.