ಜಿಲ್ಲಾಡಳಿತ ಅನುಮತಿ ಪುನರ್ ಪರಿಶೀಲಿಸಲಿ: ಮೋಹನ್
ಮಂಗಳೂರು, ಫೆ.9: ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವ ಬ್ರಿಗೇಡ್‌ನವರು ನಗರದ ನೆಹರೂ ಮೈದಾನದಲ್ಲಿ ಸ್ವಾಮಿ ವಿವೇಕಾನಂದ- ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರುವುದು ಆಶ್ಚರ್ಯವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಪುನರ್ ಪರಿಶೀಲನೆ ನಡೆಸಬೇಕು ಎಂದು ಎಐಸಿಸಿ ಸದಸ್ಯ ಪಿ.ವಿ.ಮೋಹನ್ " ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಹಾಗೂ ಯುವಬ್ರಿಗೇಡ್‌ನ ವಿಚಾರಧಾರೆಗಳಿಗೆ ಸಾಮ್ಯತೆ ಇಲ್ಲ. ವಿವೇಕಾನಂದರು ಪ್ರಗತಿಪರ ಮತ್ತು ಜಾತ್ಯತೀತ ತತ್ತ್ವದಡಿ ಕೆಲಸ ಮಾಡಿದ್ದರೆ, ಯುವಬ್ರಿಗೇಡ್ ಜಾತಿ ಮತ್ತು ಧರ್ಮ ಆಧಾರದಲ್ಲಿ ಆಧಾರದಲ್ಲಿ ಜನರನ್ನು ವಿಂಗಡಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ದೇಶದ ಯುವಕರನ್ನು ಒಗ್ಗೂಡಿಸುವ ಕೆಲಸ ಮಾಡಿದರೆ ಇವರು ಜನರ ನಡುವೆ ಒಡಕು ಸೃಷ್ಟಿಸುವ ಕೆಲಸವನ್ನು ಮಾಡಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲೆಯವರು ಹೋದಲ್ಲೆಲ್ಲಾ ಬೆಂಕಿಯ ಮಾತುಗಳನ್ನು ಆಡಿ, ಕಪೋಲಕಲ್ಪಿತ ಕಥೆಗಳನ್ನು ಹೇಳುತ್ತಾ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದೀಗ ನೆಹರೂ ಮೈದಾನದಲ್ಲೂ ನಡೆಯುವ ಕಾರ್ಯಕ್ರಮದಲ್ಲಿ ಇವರ ಹಿಡನ್ ಎಜೆಂಡಾ ಕೆಲಸ ಮಾಡುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವುದು ಸರಿಯಲ್ಲ ಎಂದರು.
ಈ ಹಿಂದೆ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದ್ದ ಝಾಕಿರ್ ನಾಯಕ್‌ರ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಅಲ್ಲದೆ, ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೂ ನಿರ್ಬಂಧ ಹೇರಿತ್ತು. ಹಾಗೆಯೇ ಯುವ ಬ್ರಿಗೇಡ್‌ನ ಕಾರ್ಯಕ್ರಮಕ್ಕೂ ಜಿಲ್ಲಾಡಳಿತ ನಿರ್ಬಂಧ ಹೇರಲಿ ಎಂದು ಹೇಳಿದ್ದಾರೆ.