×
Ad

ಮಂಗಳೂರು: ಬಾಣಂತಿ ಪತ್ನಿಯ ಕೊಲೆ; ಪತಿಯ ಅಪರಾಧ ಸಾಬೀತು

Update: 2017-02-09 21:38 IST

ಮಂಗಳೂರು, ಫೆ. 9: ಬಾಣಂತಿ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಪತಿಯನ್ನು ಮಂಗಳೂರು ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಯೆಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಫೆ.13ರಂದು ಪ್ರಕಟಿಸಲಿದೆ.
ಎಡಪದವು ಕುವೆದಪಾಡಿ ನಿವಾಸಿ ಜಯಂತ್ (33) ಅಪರಾಧಿ. ಈತ ತನ್ನ ಬಾಣಂತಿ ಪತ್ನಿಯನ್ನು ಕೊಲೆಗೈದು, ಎರಡು ದಿನದ ಹಸುಗೂಸಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ,ಸಾರ್ವಜನಿಕರಿಗೆ ಬೆದರಿಕೆಯೊಡ್ಡಿದ ಆರೋಪ ಎದುರಿಸುತಿತಿದ್ದ.

ಪ್ರಕರಣದ ಹಿನ್ನಲೆ:

ಅಪರಾಧಿಯಾಗಿರುವ ಜಯಂತ್ ಬಡಗ ಮಿಜಾರು ಗ್ರಾಮದ ಕೊಪ್ಪದಕುಮೇರು ನಿವಾಸಿ ಜಯಂತಿ (24) ಎಂಬಾಕೆಯನ್ನು ಪರಿಚಯಿಸಿಕೊಂಡು ಪ್ರೀತಿಸಲಾರಂಭಿಸಿದ್ದ. ಪ್ರೀತಿ ದೈಹಿಕ ಸಂಬಂಧ ಬೆಳೆಸುವ ತನಕ ಮುಂದುವರಿದಿತ್ತು. ಈ ಸಂದರ್ಭ ಮದುವೆಯಾಗುವಂತೆ ಒತ್ತಾಯಿಸಿದಾಗ ಆತ ನಿರಾಕರಿಸಿದ್ದ. ಜಯಂತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾದ ಸಂದರ್ಭ ಹೆದರಿದ ಆತ 2012 ಮಾರ್ಚ್ 1 ರಂದು ಆಕೆಯನ್ನು ವಿವಾಹವಾಗಿದ್ದ. ನಂತರ ಸುಮಾರು 15 ದಿನಗಳ ಕಾಲ ಆಕೆಯ ಮನೆಯಲ್ಲಿದ್ದು, ಬಳಿಕ ಆಕೆಯನ್ನು ಬಿಟ್ಟು ಹೋಗಿದ್ದ.

ಗರ್ಭಿಣಿಯಾಗಿದ್ದ ಜಯಂತಿ ಜೂನ್ ತಿಂಗಳಿನಲ್ಲಿ ಹೆರಿಗೆಗಾಗಿ ಮೂಡುಬಿದರೆ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಜೂ.18ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಜೂ.20 ರಂದು ರಾತ್ರಿ 11 ಗಂಟೆಗೆ ಅಪರಾಧಿ ಜಯಂತ್ ಆಸ್ಪತ್ರೆಗೆ ಬಂದಿದ್ದ. ಆದರೆ, ದಾದಿಯರು ಅವನನ್ನು ಒಳಗೆ ಬಿಡಲು ನಿರಾಕರಿಸಿದ್ದರು. ಆದರೆ ಆತ ಪತ್ನಿ ಹಾಗೂ ಮಗುವನ್ನು ಒಂದು ಬಾರಿ ನೋಡಿ ಹೋಗುವುದಾಗಿ ತಿಳಿಸಿದ ಮೇರೆಗೆ ಅನುಮತಿ ನೀಡಿದ್ದರು.

ಪತ್ನಿ ಇದ್ದ ಮಹಿಳಾ ವಾರ್ಡ್‌ಗೆ ಹೋದ ಜಯಂತ್ ಮೊದಲು ಜಯಂತಿ ಮಾತನಾಡಿ, ಏಕಾಏಕಿ ಕತ್ತಿಯಿಂದ ಕಡಿದಿದ್ದಾನೆ. ಜೀವ ಉಳಿಸಿಕೊಳ್ಳುವುದಕ್ಕಾಗಿ ಅವರು ಇನ್ನೊಂದು ವಾರ್ಡ್‌ಗೆ ಓಡಿದ್ದಾರೆ. ಆಗ ಬೆಡ್ ಮೇಲಿದ್ದ ಎರಡು ದಿನದ ಮಗುವನ್ನು ಕತ್ತಿಯಲ್ಲಿ ಎತ್ತಿ ನೆಲಕ್ಕೆ ಬಿಸಾಡಿದ್ದ. ಮತ್ತೆ ಪತ್ನಿಯನ್ನು ಹಿಂಬಾಲಿಸಿ ತಲೆ, ಕುತ್ತಿಗೆಗೆ ಕಡಿದು ಕೊಲೆ ಮಾಡಿದ್ದ. ಅಲ್ಲಿದ್ದವರು ರಕ್ಷಣೆ ಬಂದಾಗ ಅವರಿಗೂ ಕತ್ತಿ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ. ಗಂಭೀರ ಗಾಯಗೊಂಡಿದ್ದ ಜಯಂತಿ ಸ್ಥಳದಲ್ಲೇ ಕೊನೆಯುಸಿರೆಳೆದರು. ಗಂಭೀರ ಗಾಯಗೊಂಡಿದ್ದ ಮಗು ಪವಾಡಸದೃಶವಾಗಿ ಬದುಕುಳಿದಿದೆ.

ಜಯಂತ್ ವಿರುದ್ಧ ಪತ್ನಿಯ ಕೊಲೆ, ಮಗುವಿಗೆ ಗಂಭೀರ ಗಾಯ, ಕೊಲೆ ಯತ್ನ, ಜೀವಬೆದರಿಕೆ ಪ್ರಕರಣ ದಾಖಲಾಗಿತ್ತು. ಈ ಎಲ್ಲ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಮೂಡುಬಿದಿರೆ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಎ.ಕೆ.ತಿಮ್ಮಯ್ಯ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಸಿ.ಎಂ.ಜೋಶಿ ಅವರು ಪ್ರಕರಣದ ವಿಚಾರಣೆ ನಡೆಸಿ ಜಯಂತ್ ಅಪರಾಧಿ ಎಂದು ತೀರ್ಪು ನೀಡಿದ್ದಾರೆ. ಫೆ.13 ರಂದು ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳಲಿದೆ.

ಸರ್ಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ಅವರು ಒಟ್ಟು 39 ಸಾಕ್ಷಿ ಒದಗಿಸಿದ್ದರು. ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಕ ಹಂತದಲ್ಲಿ ಹಿರಿಯ ಸರಕಾರಿ ಅಭಿಯೋಜಕರಾದ ಪುಷ್ಪರಾಜ ಅಡ್ಯಂತಾಯ ಹಾಗೂ ಮಂಜುನಾಥ ಭಟ್ ಪನ್ನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News