ಉ.ಪ್ರ:2ನೇ ಹಂತದ ಚುನಾವಣಾ ಕಣದಲ್ಲಿ ಕ್ರಿಮಿನಲ್ ಹಿನ್ನೆಲೆಯ 107 ಜನರು, 256 ಕೋಟಿಪತಿಗಳು
ಹೊಸದಿಲ್ಲಿ,ಫೆ.9: ಉತ್ತರ ಪ್ರದೇಶ ವಿಧಾನಸಭೆಗೆ ಫೆ.15ರಂದು ನಡೆಯಲಿರುವ ಎರಡನೇ ಹಂತದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ 107 ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, 256 ಜನರು ಕೋಟಿಪತಿಗಳಾಗಿದ್ದಾರೆ.
ಸರಕಾರೇತರ ಸಂಸ್ಥೆ ಎಡಿಆರ್ ಕಣದಲ್ಲಿರುವ ಒಟ್ಟೂ 721 ಅಭ್ಯರ್ಥಿಗಳ ಪೈಕಿ 719 ಜನರು ಸಲ್ಲಿಸಿರುವ ಸ್ವಪ್ರಮಾಣೀಕೃತ ಅಫಿದಾವತ್ತುಗಳನ್ನು ವಿಶ್ಲೇಷಿಸಿದ್ದು, ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ 107 ಅಭ್ಯರ್ಥಿಗಳ ಪೈಕಿ 84 ಜನರು ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧ ಅಪರಾಧ ಇತ್ಯಾದಿ ಗಂಭೀರ ಆರೋಪಗಳನ್ನು ಹೊತ್ತಿದ್ದಾರೆ ಎಂದು ವರದಿ ಮಾಡಿದೆ.
ಬಿಜೆಪಿಯ 67 ಅಭ್ಯರ್ಥಿಗಳ ಪೈಕಿ 16, ಬಿಎಸ್‌ಪಿಯ 67ರ ಪೈಕಿ 25, ಆರ್‌ಎಲ್‌ಡಿಯ 52ರಲ್ಲಿ 6, ಎಸ್‌ಪಿಯ 51ರ ಪೈಕಿ 21, ಕಾಂಗ್ರೆಸ್‌ನ 18ರಲ್ಲಿ 6 ಮತ್ತು 206 ಪಕ್ಷೇತರ ಅಭ್ಯರ್ಥಿಗಳ ಪೈಕಿ 13 ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.
ಬಿಎಸ್‌ಪಿಯ 58, ಬಿಜೆಪಿಯ 50, ಎಸ್‌ಪಿಯ 45, ಕಾಂಗ್ರೆಸ್‌ನ 13, ಆರ್‌ಎಲ್‌ಡಿಯ 15 ಮತ್ತು 36 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 256 ಜನರು ಒಂದು ಕೋ.ರೂ.ಗೂ ಅಧಿಕ ವೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದಾರೆ.