ಫೆ.11ರಂದು ತೊಕ್ಕೊಟ್ಟುನಿಂದ ತಲಪಾಡಿವರೆಗೆ ರಸ್ತೆ ತಡೆ, ಬಸ್ ಬಂದ್
ಉಳ್ಳಾಲ, ಫೆ.10: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿಸದೆ ಹಾಗೂ ಮೂಲಸೌಕರ್ಯದ ವ್ಯವಸ್ಥೆ ಕಲ್ಪಿಸದೆ ಟೋಲ್ ಸಂಗ್ರಹಿಸುವ ನವಯುಗ್ ಕಂಪೆನಿಯ ವಿರುದ್ಧ ಪಕ್ಷಾತೀತವಾಗಿ ಹಲವು ಸಂಘಟನೆಗಳು ಸೇರಿಕೊಂಡು ಫೆ.11ರಂದು ತೊಕ್ಕೊಟ್ಟುವಿನಿಂದ ತಲಪಾಡಿವರೆಗೆ ರಸ್ತೆ ತಡೆ ಮತ್ತು ಬಸ್ ಬಂದ್ ನಡೆಸಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪಂಪ್ ವೆಲ್ ಮತ್ತು ತೊಕ್ಕೊಟ್ಟುವಿನ ಫ್ಲೈಓವರ್ ಕಾಮಗಾರಿ, ಸರ್ವಿಸ್ ರಸ್ತೆಯೂ ಆಗಿಲ್ಲ. ಸಾರ್ವಜನಿಕರಿಗೆ ವಂಚಿಸುವ ನಿಟ್ಟಿನಲ್ಲಿ ಟೋಲ್ ಆರಂಭಿಸಲಾಗಿದೆ. ಇದಕ್ಕೆ ಅನುಮತಿ ನೀಡಿರುವ ಕೇಂದ್ರ ಸರಕಾರದ ಕ್ರಮ ಖಂಡನೀಯ. ಸಂಸದರು ಇದಕ್ಕೆ ಕೂಡಲೇ ಸ್ಪಂದಿಸಬೇಕಿದೆ. ನಾಳೆ ನಡೆಯುವ ಬಂದ್‌ನಲ್ಲಿ ಟೂರಿಸ್ಟ್ ವಾಹನಗಳ, ರಿಕ್ಷಾ, ಖಾಸಗಿ ಚಾಲಕರು ಮಾಲಕರು, ಗಡಿನಾಡು ರಕ್ಷಣಾ ವೇದಿಕೆ, ತುಳುನಾಡು ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಂದ್ ನಡೆಯಲಿದೆ ಎಂದರು.
ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ಧೀಖ್ ತಲಪಾಡಿ ಮಾತನಾಡಿ, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ತೊಕ್ಕೊಟ್ಟುವಿನಿಂದ ತಲಪಾಡಿವರೆಗೆ ಬಂದ್ ನಡೆಯಲಿದೆ. ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ನಡೆಸುವುದಿಲ್ಲ. ಅಂಗಡಿಗಳ ಮಾಲಕರು ಸ್ವಇಚ್ಛೆಯಿಂದ ಬಂದ್ ನಡೆಸುವ ವಿಶ್ವಾಸವಿದೆ. ಬಸ್ಸು ಮಾಲಕರು ಬೆಂಬಲ ನೀಡಿರುವುದರಿಂದ ಖಾಸಗಿ ಬಸ್ ಸಂಚಾರ ಸಂಪೂರ್ಣವಾಗಿ ಬಂದ ಆಗಲಿದೆ. ಆ್ಯಂಬುಲೆನ್ಸ್, ಪತ್ರಿಕಾ ವಾಹನ, ಹಾಲಿನ ವಾಹನ, ಔಷಧಿ ಅಂಗಡಿಗಳಿಗೆ ಬಂದ್ ವೇಳೆ ವಿನಾಯಿತಿ ಇದೆ ಎಂದರು. ಈ ಸಂದರ್ಭ ಕಾಂಗ್ರೆಸ್ ಕ್ಷೇತ್ರ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಟೂರಿಸ್ಟ್ ವಾಹನ ಮತ್ತು ಮಾಲಕರ ಸಂಘದ ದಿನೇಶ್ ಕುಂಪಲ, ಜಿಪಂ ಮಾಜಿ ಸದಸ್ಯ ಮುಸ್ತಫಾ, ಗಣೇಶ್ ತಲಪಾಡಿ ಇತರರು ಇದ್ದರು.
ಫೆ.14ರಂದು ಸಭೆ ಕರೆಯಲಾಗಿದೆ: ಸಂಸದ ನಳಿನ್
ತಲಪಾಡಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಸ್ಥಳೀಯ ನಿವಾಸಿಗಳಿ ಟೋಲ್ ರಹಿತವಾಗಿ ಸಂಚರಿಸಲು ಅವಕಾಶ ನೀಡುವಂತೆ ಮತ್ತು ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ನವಯುಗ್ ಕಂಪೆನಿಯವರಿಗೆ ಹಿಂದೆಯೇ ಸೂಚಿಸಿದ್ದೆ. ಅದಲ್ಲದೇ ಮೂಲಭೂತ ಸೌಕರ್ಯಗಳು, ತೊಕ್ಕೊಟ್ಟು, ಪಂಪ್‌ವೆಲ್ ಫ್ಲೈಓವರ್ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸಬಾರದೆಂದು ಸೂಚಿಸಿದ್ದೇನೆ. ಅದರ ನಡುವೆಯೂ ಟೋಲ್ ಸಂಗ್ರಹ ನಡೆಸುತ್ತಿರುವುದು ಸರಿಯಲ್ಲ. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ.ವರಿಗೆ ಪತ್ರವನ್ನು ಬರೆಯುತ್ತೇನೆ. ಫೆ.14 ರಂದು ಗ್ರಾಮಸ್ಥರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ, ನವಯುಗ ಕಂಪೆನಿ ಅಧಿಕೃತರ ಸಮ್ಮುಖದಲ್ಲಿ ಸಭೆಯನ್ನು ಕರೆಲಾಗಿದೆ ಎಂದರು.