×
Ad

ಸುಳ್ಯದ ಸ್ನೇಹ ಶಾಲೆಗೆ ಭಾರತ ರತ್ನ ವಿಜ್ಞಾನಿಯ ಭೇಟಿ, ಉದ್ಯಾನದ ಉದ್ಘಾಟನೆ

Update: 2017-02-10 20:00 IST

ಸುಳ್ಯ,ಫೆ.10: ಒಂದು ಪ್ರಶ್ನೆಗೆ ಉತ್ತರ ದೊರೆತ ಕೂಡಲೇ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳುವುದು ವಿಜ್ಞಾನದಲ್ಲಿ ಮಾತ್ರ ಸಾಧ್ಯ. ವಿಜ್ಞಾನವೆಂಬುದು ಒಂದು ಕರ್ತವ್ಯ. ಅದು ಹೊಸತನದ ಆವಿಷ್ಕಾರ ಎಂದು ಭಾರತರತ್ನ ವಿಜ್ಞಾನಿಪ್ರೊ. ಸಿ.ಎನ್‌.ಆರ್.ರಾವ್ ಹೇಳಿದ್ದಾರೆ.

ಸುಳ್ಯದ ಸ್ನೇಹ ಶಾಲೆಗೆ  ಭೇಟಿ ನೀಡಿದ ಅವರು ನೂತನ ವಿಜ್ಞಾನ ಉದ್ಯಾನದ ಉದ್ಘಾಟನೆ ನೆರವೇರಿಸಿ "ಶಿಕ್ಷಣ - ವಿಜ್ಞಾನ-ಸಂಶೋಧನೆ" ವಿಚಾರವಾಗಿ ಉಪನ್ಯಾಸ  ನೀಡಿದರು. ಇದಕ್ಕೂ ಮೊದಲು ಶಾಲೆಯ ಶೈಕ್ಷಣಿಕ ವ್ಯವಸ್ಥೆಳಾದ ಗುರುಕುಲ, ಚೌಕಿ, ಕಲಾಶಾಲೆ, ವೃತ್ತಾಕಾರದ ಕೊಠಡಿಗ, ಬಯಲು ಸೂರ್ಯಾಲಯವನ್ನು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು.

  ಪ್ರಧಾನಿಯೇ ಆಗಲಿ ಯಾವ ನಾಯಕರೇ ಆಗಲಿ ಕೇವಲ ಭಾಷಣಗಳಿಂದ, ರಾಜಕೀಯದಿಂದ ಅಭಿವೃದ್ದಿ ಸಾಧ್ಯವಿಲ್ಲ. ಅದಕ್ಕೆ ಕಠಿಣ ಕಾಯಕ ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಅವರು ನನ್ನ ನಿರೀಕ್ಷೆ ಇರುವುದು ಗ್ರಾಮೀಣ ಭಾರತದಲ್ಲಿಯೇ ಹೊರತು ನಗರ ಭಾರತದಲಲಿ ಅಲ್ಲ. ಗ್ರಾಮೀಣ ಭಾರತದಿಂದ ಮಾತ್ರ ಮತ್ತೊಬ್ಬ ನ್ಯೂಟನ್, ಮತ್ತೊಬ್ಬ ಪ್ಯಾರಡೆ ಬರಲು ಸಾಧ್ಯ ಎಂದರು.

ಸಮಾರಂಭದಲ್ಲಿ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಗಿರೀಶ್ ಭಾರದ್ವಾಜ್ ಅವರನ್ನು ಗೌರವಿಸಲಾಯಿತು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಬರೆದ 'ಡೋಂಟ್‌ಸೇ ಮೈ ಚೈಲ್ಡ್ ಈಸ್ ಮಿಲ್ಡ್’ ಕೃತಿಯನ್ನು ಇಂದುಮತಿ ರಾವ್ ಬಿಡುಗಡೆ ಮಾಡಿದರು. ಕುವೆಂಪು ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಡಾ.ಚಿದಾನಂದ ಕೊಳಂಬೆ ಪ್ರೊ. ಸಿ.ಎನ್‌.ಆರ್.ರಾವ್ ಅವರನ್ನು ಪರಿಚಯಿಸಿದರು.

 ಡಾ.ಚಂದ್ರಶೇಖರ ದಾಮ್ಲೆ ಸ್ವಾಗತಿಸಿ ಪ್ರಸ್ತಾವನೆಗೈದರು. ಸಮೀರ ದಾಮ್ಲೆ ಕಾಯಕ್ರಮ ನಿರೂಪಿಸಿದರು. ಶಾಲಾ ಸಂಚಾಲಕ ಡಾ.ವಿದ್ಯಾಶಾಂಭವ ಪಾರೆ ವಂದಿಸಿದರು. ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ, ಅಕ್ಷರ ದಾಮ್ಲೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News