ಸಾಸ್ತಾನ, ಹೆಜಮಾಡಿ ಟೋಲ್‌ಗೇಟ್ ಆಸುಪಾಸು ನಿಷೇಧಾಜ್ಞೆ

Update: 2017-02-10 14:37 GMT

ಉಡುಪಿ, ಫೆ.10: ತಾಲೂಕಿನ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ಟೋಲ್‌ಗೇಟ್ ಹಾಗೂ ಕೋಟ ಠಾಣಾ ವ್ಯಾಪ್ತಿಯ ಸಾಸ್ತಾನ ಗುಂಡ್ಮಿ ಟೋಲ್‌ಗೇಟ್ ಆಸುಪಾಸಿನ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಇಂದು ಸಂಜೆ 6:00ಗಂಟೆಯಿಂದ ಫೆ.15ರ ಬುಧವಾರ ಮಧ್ಯರಾತ್ರಿ 12:00 ಗಂಟೆಯವರೆಗೆ ಸಿಆರ್‌ಪಿಸಿ ಕಲಂ 144ರ ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಆದೇಶ ಹೊರಡಿಸಿದ್ದಾರೆ.

 ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ಫೆ.9ರ ಮಧ್ಯರಾತ್ರಿ 12:00 ಗಂಟೆಯಿಂದ ಟೋಲ್ ಸಂಗ್ರಹ ಮಾಡಲು ಆರಂಭಿಸಿರುವ ಹಿನ್ನೆಲೆಯಲ್ಲಿ, ಟೋಲ್ ಸಂಗ್ರಹವನ್ನು ವಿರೋಧಿಸಿ ಪರಿಸರದ ಜನತೆ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ, ಮುಷ್ಕರ, ಬಂದ್‌ಗೆ ಕರೆ ನೀಡಿರುವ ಸಾರ್ವಜನಿಕ ಶಾಂತಿಭಂಗವಾಗುವ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆಯಾ ಠಾಣೆಗಳ ಪೊಲೀಸ್ ಅಧೀಕ್ಷಕರ ಮನವಿಯಂತೆ ನಿಷೇಧಾಜ್ಞೆಯನ್ನು ವಿಧಿಸಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ಹಾಗೂ ತಿರುಗುವುದನ್ನು ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಯಾವುದೇ ರೀತಿಯ ಸಾರ್ವಜನಿಕ ಸಭೆ, ಸಮಾರಂಭ, ಮೆರವಣಿಗೆ, ಪ್ರತಿಭಟನಾ ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ. ಆದರೆ ಸರಕಾರಿ ಅಥವಾ ಸರಕಾರದ ಆದೇಶದಂತೆ ನಡೆಯುವ ಕಾರ್ಯಕ್ರಮ, ಸಭೆಗಳಿಗೆ ಇದು ಅನ್ವಯಿಸುವುದಿಲ್ಲ.

ನಿಷೇಧಿತ ಪ್ರದೇಶ ವ್ಯಾಪ್ತಿಯಲ್ಲಿ ಮಾರಕ ಆಯುಧಗಳನ್ನು, ಸ್ಪೋಟಕ ವಸ್ತುಗಳನ್ನು ಹೊಂದಿರುವುದನ್ನು ಹಾಗೂ ಅವುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸ್ಪಷ್ಟ ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News