ಪಾಸ್‌ಪೋರ್ಟ್‌ನಲ್ಲಿ ವೈಯಕ್ತಿಕ ವಿವರದ ಅಗತ್ಯವಿಲ್ಲ
ಹೊಸದಿಲ್ಲಿ, ಫೆ.10: ಪತಿ, ಪತ್ನಿ, ಹೆತ್ತವರ ಹೆಸರು ಇತ್ಯಾದಿ ವೈಯಕ್ತಿಕ ವಿವರ ಬಯಲು ಮಾಡದ ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲು ಸರಕಾರ ಚಿಂತನೆ ನಡೆಸುತ್ತಿದೆ. ವಿದೇಶ ವ್ಯವಹಾರ ಸಚಿವಾಲಯವು ಈ ಬಗ್ಗೆ ಶೀಘ್ರದಲ್ಲೇ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
ಪ್ರಸ್ತಾವಿತ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ ಒಂಟಿಯಾಗಿರುವ ಹೆತ್ತವರ ಜೊತೆಗಿರುವ ಮಕ್ಕಳು ಕೂಡಾ ಸುಲಭದಲ್ಲಿ ಪಾಸ್‌ಪೋರ್ಟ್ ಪಡೆಯಬಹುದು. ಪ್ರಸ್ತುತ ಇರುವ ಕಾನೂನಿನ ಪ್ರಕಾರ ಮಕ್ಕಳು ಪಾಸ್‌ಪೋರ್ಟ್ ಪಡೆಯಬೇಕಾದರೆ ತಮ್ಮ ತಂದೆ, ತಾಯಿಯ ವಿವರ ನೀಡಬೇಕು.
ಪಾಸ್‌ಪೋರ್ಟ್ ಅರ್ಜಿ ಪುಸ್ತಕದಲ್ಲಿ ಇರುವ ವೈಯಕ್ತಿಕ ಮಾಹಿತಿ ವಿಭಾಗದ ಬಗ್ಗೆ ಅಧ್ಯಯನ ನಡೆಸಲು ವಿದೇಶ ವ್ಯವಹಾರ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ರಚಿಸಿರುವ ಮೂವರು ಸದಸ್ಯರ ಸಮಿತಿಯು ಸಲ್ಲಿಸಿರುವ ಶಿಫಾರಸ್ಸಿನಂತೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಹುತೇಕ ರಾಷ್ಟ್ರಗಳ ಪಾಸ್‌ಪೋರ್ಟ್‌ನಲ್ಲಿ ಈ ಕಾಲಂ ಇರುವುದಿಲ್ಲ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದ್ದು ಅಂತಿಮ ನಿರ್ಣಯಕ್ಕೆ ಬರುವ ಮೊದಲು ಸಂಬಂಧಪಟ್ಟರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ವಿದೇಶ ವ್ಯಹಾರ ಇಲಾಖೆಯ ಮೂಲಗಳು ತಿಳಿಸಿವೆ.