×
Ad

ಸಾಸ್ತಾನ ಟೋಲ್ ಕೇಂದ್ರದಲ್ಲಿ ಶುಲ್ಕ ಸಂಗ್ರಹ ಆರಂಭ : ರಾ.ಹೆದ್ದಾರಿ ಜಾಗೃತ ಸಮಿತಿಯಿಂದ ಹೋರಾಟಕ್ಕೆ ಕರೆ

Update: 2017-02-10 23:10 IST

ಉಡುಪಿ, ಫೆ.10: ಸಾರ್ವಜನಿಕರ ಅಸಮಧಾನ, ಹೋರಾಟದ ಎಚ್ಚರಿಕೆಯ ನಡುವೆ ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಗುಂಡ್ಮಿಯ ಟೋಲ್ ಕೇಂದ್ರದಲ್ಲಿ ಗುರುವಾರ ಮಧ್ಯರಾತ್ರಿಯಿಂದ ಟೋಲ್ ಸಂಗ್ರಹ ಪ್ರಾರಂಭಗೊಂಡಿದೆ.

 ಟೋಲ್ ಸಂಗ್ರಹಕ್ಕೆ ಜನರ ವಿರೋಧ ಅರಿವಿನಿಂದ ಟೋಲ್‌ಗೇಟ್ ಸುತ್ತ ಬಿಗುವಾದ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಯಾವುದೇ ಪೂರ್ವ ಸೂಚನೆ ನೀಡದೇ, ಜಿಲ್ಲಾಡಳಿತದಿಂದ ಹಸಿರು ನಿಶಾನೆ ಪಡೆದು ಮಧ್ಯರಾತ್ರಿ 12:00 ಗಂಟೆಯಿಂದಲೇ ಟೋಲ್ ಸಂಗ್ರಹವನ್ನು ಪ್ರಾರಂಭಿಸಿರುವುದರಿಂದ ಇಂದು ಪರಿಸರದ ಹಾಗೂ ಈ ಹೆದ್ದಾರಿಯ ಬಳಕೆದಾರರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಮೊದಲ ದಿನ ಕೆ.ಎ.20 ವಾಹನಗಳಿಗೆ ಮಾಸಿಕ ಪಾಸ್ ಖರೀದಿಸುವಂತೆ ತಿಳಿಸಿ ಟೋಲ್‌ನಿಂದ ರಿಯಾಯಿತಿ ನೀಡಲಾಯಿತು. ಇಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿ ಟೋಲ್‌ಗೇಟ್‌ನ ಎರಡು ಬದಿಯಲ್ಲಿ 5ಕಿ.ಮೀ. ವ್ಯಾಪ್ತಿಯ ಖಾಸಗಿ ವಾಹನಗಳಿಗೆ ತಿಂಗಳಿಗೆ 110ರೂ. ದರ ನಿಗದಿ ಪಡಿಸುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ನಾವು ಈ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾಗಿ ಹೋರಾಟ ಗಾರರು ತಿಳಿಸಿದ್ದಾರೆ. ನಮ್ಮೆಲ್ಲಾ ಬೇಡಿಕೆಗಳ ಈಡೇರಿಕೆ ಹಾಗೂ ಸ್ಥಳೀಯರಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಬೇಕು ಎನ್ನುವುದು ಹೋಾಟಗಾರರ ದೃಢವಾದ ನಿರ್ಧಾರವಾಗಿದೆ.

 ಇಂದು ಸ್ಥಳೀಯವಾದ ಖಾಸಗಿ ವಾಹನಗಳಿಗೆ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಟೋಲ್ ಪಡೆಯದೆ ಸಂಚರಿಸಲು ಅವಕಾಶ ನೀಡಿದ್ದರು. ಉಳಿದಂತೆ ಬಹುತೇಕ ಎಲ್ಲಾ ವಾಹನಗಳಿಂದಲೂ ಟೋಲ್ ಪಡೆಯಲಾ ಯಿತು. ಈ ನಡುವೆ ಟೋಲ್ ಸಂಗ್ರಹದ ಕುರಿತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಲವು ಘಟನೆಗಳು ನಡೆದ ಬಗ್ಗೆ ವರದಿಯಾಗಿದೆ. ಹೀಗಾಗಿ ಹೆಚ್ಚಿನ ಭದ್ರತೆ ನಡುವೆ ಟೋಲ್‌ಕೇಂದ್ರದಲ್ಲಿ ಟೋಲ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣೆಗಳ ಸಿಬ್ಬಂದಿಗಳು ಟೋಲ್ಕೇಂದ್ರಕ್ಕೆ ಭದ್ರತೆ ಒದಗಿಸಿದ್ದರು.

ಹೋರಾಟಕ್ಕೆ ಕರೆ  : ರಾಷ್ಟ್ರೀಯ ಹೆದ್ದಾರಿ ಜಾಗೃತ ಸಮಿತಿಯ ಪ್ರಮುಖರು ಇಂದು ಸಂಜೆ ಸಾಸ್ತಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಟೋಲ್ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದರು. ಫೆ.11ರಂದು ಬೆಳಿಗ್ಗೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಟೋಲ್ ಕೇಂದ್ರದ ಎದುರು ಸಾಂಕೇತಿಕ ಧರಣಿ ನಡೆಯಲಿದ್ದು, ಬೇಡಿಕೆಗಳು ಈಡೇರದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಕಳೆದ ವಾರ ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ನಾಲ್ಕು ದಿನದೊಳಗೆ ಎಷ್ಟು ಶೇ. ಚತುಷ್ಪಥ ಕಾಮಗಾರಿ ಮುಗಿದಿದೆ ಎನ್ನುವುದನ್ನು ವರದಿ ನೀಡುವಂತೆ ಸಚಿವರು ತಿಳಿಸಿದ್ದರು. ವರದಿ ನೀಡುವ ತನಕ ಟೋಲ್ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಆದರೂ ವರದಿಯ ಕುರಿತು ಜನರಿಗೆ ಯಾವುದೇ ಮಾಹಿತಿ ಒದಗಿಸದೇ ಕಂಪೆನಿಗೆ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಿದ್ದನ್ನು ಜಾಗೃತ ಸಮಿತಿಯ ಸದಸ್ಯರು ಪ್ರಶ್ನಿಸಿದರು.

ಟೋಲ್ ಸಮಸ್ಯೆಯ ಕುರಿತು ಹಲವು ಬಾರಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ನೀಡಲಾಗಿದೆ ಹಾಗೂ ಜನರ ಸಮಸ್ಯೆಯನ್ನು ಅವರ ಗಮನಕ್ಕೆ ತರಲಾಗಿದೆ. ಆದರೆ ಇದುವರೆಗೆ ಸಂಸದರು ನಮ್ಮ ಸಮಸ್ಯೆಗೆ ಧನಿಯಾಗುವಲ್ಲಿ ವಿಲರಾಗಿದ್ದಾರೆ. ಆದ್ದರಿಂದ ಕಡೇ ಪಕ್ಷ ಒಂದೇ ಒಂದು ಬಾರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆಗಳನ್ನು ಕೇಳಬೇಕು ಎಂದು ಸಮಿತಿಯ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಸಂಸದರಿಗೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಐರೋಡಿ ಗ್ರಾಪಂ ಅಧ್ಯಕ್ಷ ಗೋವಿಂದ ಪೂಜಾರಿ, ಪಾಂಡೇಶ್ವರ ಗ್ರಾಪಂ ಅಧ್ಯಕ್ಷ ಮೋಸೆಸ್ ರೋಡಿಗ್ರಸ್, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರಾಜೇಶ ಕಾವೇರಿ, ಸಮಿತಿಯ ಮುಖ್ಯಸ್ಥರಾದ ಅಚ್ಯುತ್ ಪೂಜಾರಿ, ವಿಠಲ ಪೂಜಾರಿ ಉಪಸ್ಥಿತರಿದ್ದರು.

ಸೋಮವಾರ ಜಿಲ್ಲಾ ಬಂದ್‌ಗೆ ಕರೆ

ಸೋಮವಾರ ಜಿಲ್ಲಾ ಬಂದ್‌ಗೆ ಕರೆ ಶನಿವಾರದ ಸಾಂಕೇತಿಕ ಪ್ರತಿಭಟನೆಗೆ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ ಸೋಮವಾರ ಉಡುಪಿ ಜಿಲ್ಲಾ ಬಂದ್ ನಡೆಸುವುದಾಗಿ ಹೆದ್ದಾರಿ ಜಾಗೃತ ಸಮಿತಿ ಸದಸ್ಯರು ತಿಳಿಸಿದರು. ಅಂದು ಕುಂದಾಪುರದಿಂದ ಉಡುಪಿ ತನಕ ವಿವಿಧ ಕಡೆ ಪ್ರತಿಭಟನೆ ನಡೆಸುವುದಾಗಿ ಹಾಗೂ ಶಾಲಾ ಕಾಲೇಜುಗಳ ಬಂದ್‌ಗೆ ಕರೆ ನೀಡುವುದಾಗಿಯೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News