ಬಾಲ ಕಾರ್ಮಿಕ ಕಾಯ್ದೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧ

Update: 2017-02-10 17:47 GMT

ಉಡುಪಿ, ಫೆ.10: ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ಕ್ಕೆ ತಿದ್ದುಪಡಿಯಾಗಿ, ಭಾರತ ಸರಕಾರದ 2016ರ ಜು.30ರ ಅಧಿಸೂಚನೆ ಪ್ರಕಾರ ಬಾಲಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯನ್ನು, ಬಾಲಕಾರ್ಮಿಕರ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ)ಕಾಯ್ದೆ 1986 ಎಂದು ತಿದ್ದುಪಡಿ ಮಾಡಲಾಗಿದೆ.

ತಿದ್ದುಪಡಿ ಕಾಯ್ದೆ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದು ಮತ್ತು ನೇಮಕ ಮಾಡಿಕೊಳ್ಳುವುದು ಸಂಪೂರ್ಣ ನಿಷೇಧಿಸಲ್ಪಟ್ಟಿದೆ.

18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಗಣಿ ಕೆಲಸದಲ್ಲಿ, ಪೆಟ್ರೋಕೆಮಿಕಲ್ ಇಂಡಸ್ಟ್ರೀ, ಆಯಿಲ್‌ರಿಪೈನಿಂಗ್, ಫರ್ಟಿಲೈಸರ್ ಇಂಡಸ್ಟ್ರೀ, ಸಿಮೆಂಟ್ ಇಂಡಸ್ಟ್ರೀ, ಪೈಂಟ್ಸ್ ಪಿಗ್ಮೆಂಟ್, ಎಲೆಕ್ಟ್ರೋ ಪ್ಲೇಟಿಂಗ್, ಕೆಮಿಕಲ್ ಇಂಡಸ್ಟ್ರೀಸ್, ಸಿಂಥೆಟಿಕ್ ರೆಸಿನ್ ಮತ್ತು ಪ್ಲಾಸ್ಟಿಕ್ಸ್, ಗ್ಲಾಸ್ ಸಿರಾಮಿಕ್ ಮತ್ತು ಹೆಚ್ಚು ಸುಡುವ ದ್ರವ ಮತ್ತು ಅನಿಲ ಕಾರ್ಖಾನೆಗಳಲ್ಲಿ ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ಈ ಕಾನೂನು ಉಲ್ಲಂಘನೆ ಮಾಡಿದವರಿಗೆ 6 ತಿಂಗಳುಗಳಿಗೆ ಕಡಿಮೆ ಇಲ್ಲದಂತೆ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಕನಿಷ್ಠ 20,000ರೂ. ನಿಂದ ಗರಿಷ್ಠ 50,000 ರೂ.ವರೆಗೆ ದಂಡವನ್ನು ಅಥವಾ ಎರಡನ್ನು ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಬಾಲಕಾರ್ಮಿಕರ ಪುನರ್ವಸತಿಗಾಗಿ ಕಾಯ್ದೆಯನ್ನು ಉಲ್ಲಂಘಿಸಿದ ಮಾಲಕರು 20,000ರೂ.ವನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಉಡುಪಿ ಇವರ ಹೆಸರಲ್ಲಿ ಠೇವಣಿ ಮಾಡಬೇಕಾಗುತ್ತದೆ. ಸಾರ್ವಜನಿಕರು, ಯಾವುದೇ ಮಾಲಕರು ಅಪಾಯಕಾರಿ ಅಥವಾ ಅಪಾಯಕಾರಿ ಅಲ್ಲದ ಉದ್ದಿಮೆ, ಹೊಟೇಲ್, ಕಾರ್ಖಾನೆ ಇತ್ಯಾದಿ ಸ್ಥಳಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

 ಬಾಲ ಕಾರ್ಮಿಕರನ್ನು ಮತ್ತು ಕಿಶೋರಾವಸ್ಥೆಯ ಕಾರ್ಮಿಕರನ್ನು ದುಡಿಸಿ ಕೊಳ್ಳುತ್ತಿರುವುದು ಕಂಡುಬಂದಲ್ಲಿ ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆ: 1098, ಕಾರ್ಮಿಕ ಇಲಾಖೆ ಉಡುಪಿ ದೂರವಾಣಿ ಸಂಖ್ಯೆ: 0820- 2574851, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ದೂರವಾಣಿ ಸಂಖ್ಯೆ: 0820-2574977 ಗೆ ತಕ್ಷಣ ದೂರು ನೀಡಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News