×
Ad

ಬಿಡಬ್ಲ್ಯುಎಫ್ ನಿಂದ 17 ಜೋಡಿಗಳ ಸಾಮೂಹಿಕ ವಿವಾಹ

Update: 2017-02-11 16:11 IST

ಮಂಗಳೂರು, ಫೆ. 11: ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ವತಿಯಿಂದ ಇಂದು ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆದ ಸಾಮೂಹಿಕ ಕಾರ್ಯಕ್ರಮದಲ್ಲಿ 17 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಖಾದ ನೇತೃತ್ವವನ್ನು ವಹಿಸಿ ದುವಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಿದ ಬಿಡಬ್ಲ್ಯುಎಫ್ನ ಸಾಮಾಜಿಕ ಸೇವೆಯನ್ನು ಶ್ಲಾಘಿಸಿ ನೂತನ ವಧು-ವರರಿಗೆ ಶುಭ ಹಾರೈಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕ ಮೊಯ್ದಿನ್ ಬಾವ ಮಾತನಾಡಿ, ಅಬುಧಾಬಿಯಲಿದ್ದುಕೊಂಡು ತಮ್ಮ ಉದ್ಯೋಗದ ಜೊತೆ ಕರಾವಳಿಯ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರ ವಿವಾಹ ಕಾರ್ಯಕ್ರಮವನ್ನು ನೆರವೇರಿಸಿರುವ ಬಿಡಬ್ಲ್ಯುಎಫ್ ಸೇವೆ ಶ್ಲಾಘನೀಯ. ಇವರ ಈ ಸೇವೆಯು ಇತರ ಸಂಘಟನೆಗಳಿಗೂ ಮಾದರಿಯಾಗಿದ್ದು, ಇನ್ನಷ್ಟು ಸಾಮಾಜಿಕ ಸೇವೆ ನೀಡುವಂತಾಗಲಿ ಎಂದು ಶುಭಹಾರೈಸಿದರು.

ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಬ್ಯಾರಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ 2004ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಬ್ಯಾರೀಸ್ ವೆಲ್‌ಫೇರ್ ಫೋರಂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಥಮವಾಗಿ 2008ರಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇಂದು ನಡೆದ 17 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಬಿಡಬ್ಲುಎಫ್‌ನ 7ನೆ ಸಾಮೂಹಿಕ ಕಾರ್ಯಕ್ರಮವಾಗಿದ್ದು, ಈ ಮೂಲಕ ಸಂಘಟನೆಯು 100 ಜೋಡಿಗಳ ವಿವಾಹ ಕಾರ್ಯಕ್ರಮವನ್ನು ನೆರವೇರಿಸಿದಂತಾಗಿದೆ ಎಂದರು.

ವಿದೇಶದಲ್ಲಿ ಉದ್ಯೋಗದಲ್ಲಿರುವ ಕರಾವಳಿಗರ ಪರಿಸ್ಥಿತಿ ಹದಗೆಟ್ಟಿದ್ದು, ಈ ಪೈಕಿ ಹಲವರು ಸ್ವದೇಶಕ್ಕೆ ಮರಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ ವಿದೇಶದಿಂದ ವಾಪಸಾಗುವವರ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವ ನಿಟ್ಟಿನಲ್ಲಿ ಕೇರಳದಲ್ಲಿ ಅಲ್ಲಿನ ಸರಕಾರ 50 ಕೋಟಿ ರೂ.ವನ್ನು ಮೀಸಲಿಟ್ಟಿದೆ. ಇದೇ ಮಾದರಿಯಲ್ಲಿ ರಾಜ್ಯ ಸರಕಾರವು ಕೂಡ ವಿದೇಶದಿಂದ ವಾಪಸಾಗುವವರ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಸಚಿವರು ಹಾಗೂ ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಬಿ.ಎಂ.ಫಾರೂಕ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಭಾರತ್ ಇನ್ಫ್ರಾಸ್ಟ್ರಕ್ಚರ್ಸ್‌ನ ಆಡಳಿತ ನಿರ್ದೇಶಕ ಮುಸ್ತಫಾ ಎಸ್.ಎಂ., ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಬಿಡಬ್ಲುಎಫ್‌ನ ಮುಖ್ಯ ಸಲಹೆಗಾರರಾದ ಸಿದ್ದೀಕ್ ಉಚ್ಚಿಲ್, ಬಶೀರ್ ಬಜ್ಪೆ, ಸಲಹೆಗಾರ ಹನೀಫ್ ಉಳ್ಳಾಲ, ಜಿಲ್ಲಾ ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷ ಮುಸ್ತಫಾ ಕೆಂಪಿ, ದುಬೈ ಎಮಿರೇಟ್ಸ್ ಗ್ಲಾಸ್ ಇಂಡಸ್ಟ್ರೀಸ್‌ನ ಫತಾವುಲ್ಲಾ ಸಾಹೇಬ್, ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುಹಮ್ಮದ್ ಹನೀಫ್, ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಆಝಾದ್ ಹಾರ್ಡ್‌ವೇರ್ಸ್‌ನ ಮನ್ಸೂರ್ ಅಹ್ಮದ್, ಬಿಡಬ್ಲುಎಫ್‌ನ ಉಪಾಧ್ಯಕ್ಷರಾದ ಹಂಝ ಅಬ್ದುಲ್ ಖಾದರ್, ಮುಹಮ್ಮದ್ ರಫೀಕ್ ಕೃಷ್ಣಾಪುರ, ಕೋಶಾಧಿಕಾರಿ ಮುಹಮ್ಮದ್ ಸಿದ್ದೀಕ್ ಕಾಪು, ಸಂಯೋಜಕ ಇಮ್ರಾನ್ ಅಹ್ಮದ್ ಕುದ್ರೋಳಿ, ಬಿಡಬ್ಲುಎಫ್ ಸಾಮೂಹಿಕ ವಿವಾಹ ಕಾರ್ಯಕ್ರಮ ಸಮಿತಿ ಸಂಚಾಲಕ ಉಮರ್ ಯು.ಎಚ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಖ್ರಾ ಅರಬಿಕ್ ಸ್ಕೂಲ್‌ನ ವಿದ್ಯಾರ್ಥಿ ಅಬ್ದುಲ್ ಬಾಸಿತ್ ಕಿರಾಅತ್ ಪಠಿಸಿದರು. ಬಿಡಬ್ಲುಎಫ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ಸ್ವಾಗತಿಸಿದರು. ಮುಖ್ಯ ಸಲಹೆಗಾರ ಸಿದ್ದೀಕ್ ಉಚ್ಚಿಲ್ ವಂದಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.
 
ಕೇರಳ ಮಾದರಿಯಲ್ಲೇ ಚಿಂತನೆ: ಸಚಿವ ಖಾದರ್
ವಿದೇಶದಲ್ಲಿ ಸಂಕಷ್ಟದಲ್ಲಿರುವ ಹಾಗೂ ಉದ್ಯೋಗವನ್ನು ಕಳೆದು ಸ್ವದೇಶಕ್ಕೆ ಮರಳುವ ಕರಾವಳಿಗರ ಆರ್ಥಿಕ ಸುಧಾರಣೆಗೆ ಮುಂದಿನ ಬಜೆಟ್‌ನಲ್ಲಿ 50 ಕೋಟ ರೂ.ವನ್ನು ಮೀಸಲಿಟ್ಟು ಕೇರಳದ ಮಾದರಿಯಲ್ಲೇ ಅನಿವಾಸಿ ಭಾರತೀಯರಿಗೆ ಸಹಾಯ ನೀಡಲು ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಇಟಿ.ಖಾದರ್ ಭರವಸೆ ನೀಡಿದ್ದಾರೆ.

ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಅವರ ಮನವಿಗೆ ಸ್ಪಂದಿಸಿ ಮಾತನಾಡಿದ ಸಚಿವರು, ಅನಿವಾಸಿ ಭಾರತೀಯರಿಗೆ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಎನ್‌ಆರ್‌ಐ ಸಮಿತಿಯೊಂದನ್ನು ರಚಿಸಲಾಗುವುದು ಎಂದರು.

ಅಬುಧಾಬಿಯಲ್ಲಿ ಉದ್ಯೋಗದ ಜೊತೆಗೆ ಕರಾವಳಿಯ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮದ ಬಗ್ಗೆ ಯೋಜನೆಯನ್ನು ಹಾಕಿ ಅದನ್ನು ಪ್ರತಿ ವರ್ಷ ನೆರವೇರಿಸುತ್ತಾ ಬಂದಿರುವ ಬಿಡಬ್ಲುಎಫ್ ಸೇವೆ ಶ್ಲಾಘನೀಯ. ಇವರ ಸೇವೆಯನ್ನು ಪಡೆದವರು ಮುಂದೆ ಇತರರ ಸಂಕಷ್ಟದಲ್ಲೂ ಭಾಗಿಯಾಗಬೇಕು ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News