×
Ad

ಪುತ್ತೂರು ನಗರಸಭೆ ಉಪಚುನಾವಣೆಗೆ ಸರ್ವ ಸಿದ್ದತೆ

Update: 2017-02-11 17:30 IST

ಪುತ್ತೂರು,ಫೆ.11: ನಗರಸಭೆಯ 6 ವಾರ್ಡ್‌ಗಳಿಗೆ ಭಾನುವಾರ ನಡೆಯಲಿರುವ ಉಪಚುನಾವಣೆಗೆ ಸರ್ವ ಸಿದ್ದತೆಗಳು ನಡೆದಿದ್ದು, ಶನಿವಾರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಮಸ್ಟರಿಂಗ್ ನಡೆಯಿತು. 6 ವಾರ್ಡ್‌ಗಳ ವ್ಯಾಪ್ತಿಯಲ್ಲಿ 4755 ಪುರುಷರು ಹಾಗೂ 4830 ಮಹಿಳೆಯರು ಸೇರಿದಂತೆ ಒಟ್ಟು 9585 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

6 ಕ್ಷೇತ್ರಗಳಲ್ಲಿ ಒಟ್ಟು 10 ಮತಗಟ್ಟೆಗಳಿದ್ದು, 6ನೇ ವಾರ್ಡ್, 16ನೇ ವಾರ್ಡ್, 21ನೇ ವಾರ್ಡ್ ಮತ್ತು 26ನೇ ವಾರ್ಡ್‌ಗಳಲ್ಲಿ ತಲಾ 2 ಮತಗಟ್ಟೆಗಳಿವೆ, ಉಳಿಂದತೆ 19ನೇ ವಾರ್ಡ್ ಮತ್ತು 22ನೇ ವಾರ್ಡ್‌ಗಳಲ್ಲಿ ತಲಾ 1 ಮತಗಟ್ಟೆಗಳಿವೆ. ಉಪಚುಣಾವಣೆಯಲ್ಲಿ ಯಾವುದೇ ಸೂಕ್ಷ್ಮ ಅಥವಾ ಅತಿಸೂಕ್ಷ್ಮ ಮತೆಗಟ್ಟೆಗಳಿಲ್ಲ. ಎಲ್ಲಾ 6 ವಾರ್ಡ್‌ಗಳೂ ಸಾಮಾನ್ಯ ಮತಗಟ್ಟೆಯಾಗಿದೆ. ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ಮುಖ್ಯ ಚುನಾವಣಾಧಿಕಾರಿಯಾಗಿದ್ದಾರೆ. ಸಹಾಯಕ ಕೃಷಿ ನಿರ್ದೇಶಕ ನಯೀಂ ಹುಸೇನ್ ಉಪಚುನಾವಣಾಧಿಕಾರಿಯಾಗಿದ್ದು, ತಹಸೀಲ್ದಾರ್ ಅನಂತಶಂಕರ್ ಅವರು ಚುನಾವಣಾ ಉಸ್ತುವಾರಿಯಾಗಿದ್ದಾರೆ. ಎಸಿಎಫ್ ಸುಂದರ್ ಶೆಟ್ಟಿ ಸೆಕ್ಟರ್ ಆಫೀಸರ್ ಆಗಿ ಮತ್ತು ತರಬೇತಿ ಅಧಿಕಾರಿ ಪ್ರಶಾಂತ್ ನಾಯಕ್ ತಾಂತ್ರಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರತಿಯೊಂದು ಮತಗಟ್ಟೆಗೆ ತಲಾ ಮೂವರು ಮತದಾನ ಅಧಿಕಾರಿಗಳು ಮತ್ತು ಒಬ್ಬರು ಡಿ ಗ್ರೂಪ್ ನೌಕರರನ್ನು ನಿಯೋಜಿಸಲಾಗಿದೆ. 1400ಕ್ಕೂ ಅಧಿಕ ಮತದಾರರಿರುವ ಮತಗಟ್ಟೆಗಳಿಗೆ ನಾಲ್ವರು ಮತದಾನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ರವಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದ್ದು, ಬಳಿಕ ತಾಲೂಕು ಕಚೇರಿಯಲ್ಲಿ ಡಿಮಸ್ಟರಿಂಗ್ ನಡೆಯಲಿದೆ. ಎಲ್ಲಾ ಮತಪೆಟ್ಟಿಗೆಗಳನ್ನು ಉಪಖಜಾನೆಯ ಭದ್ರತಾ ಕೊಠಡಿಯಲ್ಲಿರಿಸಲಾಗುತ್ತದೆ.

ನೋಟಾ ಅವಕಾಶಗಳಿಲ್ಲ:

ಮತದಾನಕ್ಕೆ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಆದರೆ ನೋಟಾ ಮತದಾನಕ್ಕೆ ಇದರಲ್ಲಿ ಅವಕಾಶಗಳಿಲ್ಲ. ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಲ್ಲಿ ನೋಟಾ ಬಳಸಲು ಇನ್ನೂ ಅವಕಾಶಗಳನ್ನು ಕಲ್ಪಸಿರದ ಕಾರಣ ನೋಟಾ ಮತದಾನಕ್ಕೆ ಅವಕಾಶಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News