ಮಂಗಳೂರು ವಿವಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಧರಣಿ
ಉಡುಪಿ, ಫೆ.11: ಮಂಗಳೂರು ವಿವಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕು ಹಾಗೂ ಸಮಸ್ಯೆಗೆ ಕಾರಣರಾದವರು ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಎಬಿವಿಪಿ ಉಡುಪಿ ಜಿಲ್ಲಾ ಘಟಕ ಶನಿವಾರ ಉಡುಪಿ ಎಂಜಿಎಂ ಕಾಲೇಜು ಎದುರು ಪ್ರತಿಭಟನೆ ನಡೆಸಿತು.
ಮಂಗಳೂರು ವಿವಿಯ ಅಧೀನದಲ್ಲಿರುವ ಹಲವು ಕಾಲೇಜು ವಿದ್ಯಾರ್ಥಿ ಗಳಿಗೆ ಕಳೆದ ಮೂರು ವರ್ಷಗಳಿಂದ ಮಾರ್ಕ್ಸ್ ಕಾರ್ಡ್ ಮತ್ತು ಫಲಿತಾಂಶಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾತ್ತಿದ್ದು, ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳದೇ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟ ಆಡಲಾಗುತ್ತಿದೆ. ಆದುದರಿಂದ ಈ ಸಮಸ್ಯೆಯನ್ನು ಒಂದು ವಾರದೊಳಗೆ ಪರಿಹರಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ವಿವಿಯಲ್ಲಿ ನಡೆಯುತ್ತಿರುವ ಇಂತಹ ಗೊಂದಲದ ಬಗ್ಗೆ ರಾಜ್ಯಪಾಲರು ಹಾಗೂ ಸರಕಾರ ಉನ್ನತಮಟ್ಟದ ತನಿಖೆ ನಡೆಸಬೇಕು. ಇಂತಹ ಗೊಂದಲ ಸೃಷ್ಟಿಸುವವರು ಕೂಡಲೇ ರಾಜಿನಾಮೆ ನೀಡಬೇಕು. ಇಲ್ಲವಾದರೆ ಬೃಹತ್ ಹೋರಾಟದ ಮೂಲಕ ವಿವಿಗೆ ಮುತ್ತಿಗೆ ಹಾಕಲಾಗುವುದುಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಣಿಪಾಲದ ಎಂಪಿಎಂಸಿ, ಉಡುಪಿಯ ಪಿಪಿಸಿ, ಎಂಜಿಎಂ ಮತ್ತಿತ್ತರ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡ ಅನುಪ್, ಪ್ರಣತಿ ಮಾತನಾಡಿದರು. ಎಂಜಿಎಂ ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ನಿಖಿಲ್, ಎಬಿವಿಪಿ ಜಿಲ್ಲಾ ಸಂಚಾಲಕ ಸಂತೋಷ್, ವಿದ್ಯಾರ್ಥಿ ಮುಖಂಡರಾದ ಶೈಲೇಶ್, ಸಭೋದ್ ಮೊದಲಾದವರು ಉಪಸ್ಥಿತರಿದ್ದರು.