ಕಲ್ಯಾಣಪುರ: ಯಕ್ಷಮಂಗಳ ಪ್ರಚಾರೋಪನ್ಯಾಸ
ಉಡುಪಿ, ಫೆ.11: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಕನ್ನಡ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಜಂಟಿ ಆಶ್ರಯದಲ್ಲಿ ಯಕ್ಷಗಾನದಲ್ಲಿ ಹಸ್ತಾಭಿನಯ ವಿಷಯದ ಕುರಿತು ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಉಪ ನ್ಯಾಸಕ ಎಚ್.ಸುಜಯೀಂದ್ರ ಹಂದೆ ಯಕ್ಷಗಾನದಲ್ಲಿ ಹಸ್ತಾಭಿನಯದ ಕುರಿತು ಮಾಹಿತಿ ನೀಡಿದರು. ಪತಾಕ ಹಸ್ತ, ಅರ್ಧಪತಾಕ, ಸೂಚಿ ಹಸ್ತ, ಶಿಖರ ಹಸ್ತ, ಸರ್ಪಾಹಸ್ತ, ಮುಷ್ಠಿ ಹಸ್ತ, ಚಕ್ರ ಹಸ್ತ, ಮುಕುಳ ಹಸ್ತ, ಚತುರ ಹಸ್ತ ಎಲ್ಲವನ್ನೂ ಸ್ವತಃ ಅಭಿನಯದ ಮೂಲಕ ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ವಹಿಸಿ ದ್ದರು. ವೇದಿಕೆಯಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ನಾರಾಯಣ ಎಂ ಹೆಗಡೆ ಉಪಸ್ಥಿತರಿದ್ದರು. ಪ್ರಾತಕ್ಷಿಕೆಯಲ್ಲಿ ಭಾಗವತರಾಗಿ ದೇವರಾಜ್ ದಾಸ್ ಮರವಂತೆ, ಮದ್ದಳೆಯಲ್ಲಿ ಮಾಧವ ಮಣೂರು, ಚಂಡೆುಲ್ಲಿ ನವೀನ್ ಕೋಟ ಸಹಕರಿಸಿದರು.
ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ. ರಾಜಶ್ರೀ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹರಿಣಾಕ್ಷಿ ಎಂ.ಡಿ. ಸ್ವಾಗತಿಸಿದರು. ಉಪನ್ಯಾಸಕ ಅಂಪಾರು ನಿತ್ಯಾನಂದ ಶೆಟ್ಟಿ ವಂದಿಸಿ ದರು. ಯಶೋಧ ಕಾರ್ಯಕ್ರಮ ನಿರೂಪಿಸಿದರು.