ಅಂತರ್ ಕಾಲೇಜು ಸ್ಪರ್ಧೆ ‘ಫಿಲೋ ವೆಂಚುರ-2017’ ಸಮಾರೋಪ
ಪುತ್ತೂರು,ಫೆ.11: ವಿದ್ಯಾರ್ಥಿಗಳು ಸೃಜಶೀಲತೆ ಮತ್ತು ಗುಣಾತ್ಮಕತೆಯನ್ನು ಅಳವಡಿಸಿಕೊಂಡಾಗ ಕಲಿಕೆಯು ಫಲಪ್ರದವಾಗಿರುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.
ಅವರು ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗವು ಆಯೋಜಿಸಿದ ರಾಜ್ಯ ಮಟ್ಟದ ಅಂತರ್ ಕಾಲೇಜು ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಸ್ಪರ್ಧಾ ಕಾರ್ಯಕ್ರಮ ‘ಫಿಲೋ ವೆಂಚುರ 2017’ ಇದರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಆಸಕ್ತಿ, ಅಗತ್ಯತೆ ಮತ್ತು ಅನುಭವ ಎಂಬ ಮೂರು ಅಂಶಗಳು ನಮ್ಮ ಕಲಿಕೆಯ ದಿಕ್ಕನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಂತರ್ ಕಾಲೇಜು ಉತ್ಸವಗಳಲ್ಲಿ ಭಾಗವಹಿಸುವುದರಿಂದ ತಮ್ಮಲ್ಲಿರುವ ಜ್ಞಾನ ಸಂಪತ್ತನ್ನು ಪರಸ್ಪರ ಹಂಚಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೊ ನೊರೊನ್ಹ ಮಾತನಾಡಿ, ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಸಾಕಷ್ಟು ಅವಕಾಶಗಳು ಸಿಗುತ್ತವೆ. ನಾವು ಇತರರಲ್ಲಿರುವ ಉತ್ತಮ ಅಂಶಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಸಾಮರ್ಥ್ಯ ಇನ್ನೂ ಹೆಚ್ಚುತ್ತದೆ ಎಂದು ಹೇಳಿದರು.
ಪುತ್ತೂರಿನ ಲೆಕ್ಕ ಪರಿಶೋಧಕ ಗಂಗಾಧರ ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಫಿಲೋ ವೆಂಚುರದ ಸಂಯೋಜಕಿ ದಿವ್ಯಶ್ರೀ ಕೆ ಉಪಸ್ಥಿತರಿದ್ದರು. ವಿಭಾಗದ ಉಪನ್ಯಾಸಕಿ ಪ್ರಿಯಾಂಕ ಅಡ್‌ಲಿನ್ ಡಿ’ಸೋಜ ಬಹುಮಾನ ವಿಜೇತರ ವಿವರ ನೀಡಿದರು. ವಿದ್ಯಾರ್ಥಿ ಸಂಯೋಜಕರಾದ ರೋಶನ್ ರೊಸಾರಿಯೊ ಸ್ವಾಗತಿಸಿದರು ಮತ್ತು ನಿಶಾ ಕೆ ವಂದಿಸಿದರು. ಮಹಮ್ಮದ್ ತನ್ವೀರ್ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿಜೇತರು: ‘ಫಿಲೋ ವೆಂಚುರ 2017ರಲ್ಲಿ ಒಟ್ಟು 13 ಕಾಲೇಜುಗಳ ತಂಡಗಳು ಭಾಗವಹಿಸಿದ್ದು, ಸಮಗ್ರ ಪ್ರಶಸ್ತಿಯನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಪಡೆದುಕೊಂಡಿತು. ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಪಡೆದುಕೊಂಡಿತು.
ಬಿಸಿನೆಸ್ ಕ್ವಿಜ್‌ನಲ್ಲಿ ಸಂತ ಅಲೋಶಿಯಸ್ ಕಾಲೇಜು (ಪ್ರ) ಮತ್ತು ಬಂಟ್ವಾಳದ ಎಸ್‌ವಿಎಸ್ ಕಾಲೇಜು (ದ್ವಿ), ಕೊಲಾಜ್ ಮತ್ತು ಕ್ರಿಯೇಟಿವಿಟಿಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಪ್ರ) ಮತ್ತು ಮಂಗಳೂರಿನ ಕೆನರಾ ಕಾಲೇಜು (ದ್ವಿ) ಮಾರ್ಕೆಟಿಂಗ್‌ನಲ್ಲಿ ಸಂತ ಅಲೋಶಿಯಸ್ ಕಾಲೇಜು (ಪ್ರ) ಮತ್ತು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ದ್ವಿ) ಮಾನವ ಸಂಪನ್ಮೂಲ ಸ್ಪರ್ಧೆಯಲ್ಲಿ ಕೆಎಸ್‌ಎಸ್ ಕಾಲೇಜು ಸುಬ್ರಹ್ಮಣ್ಯ(ಪ್ರ) ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ದ್ವಿ) ಹಾಗೂ ಬೆಸ್ಟ್ ಇವೆಂಟ್ ಮ್ಯಾನೇಜರ್ ಪ್ರಶಸ್ತಿಯನ್ನು ಸಂತ ಅಲೋಶಿಯಸ್ ಕಾಲೇಜು ಪಡೆದುಕೊಂಡಿತು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ’ದಿ ಮಿನೇಸ್ ಅಫ್ ಬ್ಲ್ಯಾಕ್ ಮನಿ’ ಕುರಿತು ಏರ್ಪಡಿಸಿದ ಪ್ರಬಂಧ ಮಂಡನೆ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿನ ಅಮೃತ ಶ್ಯಾನ್‌ಭೋಗ್ ಪ್ರಶಸ್ತಿ ಪಡೆದುಕೊಂಡರು.