ಮಾದಕ ದ್ರವ್ಯ ಮಾಫಿಯಾ ವಿರುದ್ಧ ಹೋರಾಟ
ಉಡುಪಿ, ಫೆ.11: ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಮಣಿಪಾಲ ಕೇಂದ್ರಿತವಾಗಿ ತಲೆಎತ್ತಿರುವ ಅಕ್ರಮ ಜೂಜು ಹಾಗೂ ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟುವ ವಿರುದ್ಧ ಯುವ ಮೋರ್ಚಾ ಹೋರಾಟವನ್ನು ಸಂಘಟಿಸಲಿದೆ ಎಂದು ಉಡುಪಿ ನಗರ ಯುವಮೋರ್ಚಾದ ಅಧ್ಯಕ್ಷ ಅಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
ಮಣಿಪಾಲ ನಗರದ ಹೃದಯಭಾಗದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನೇ ಬರಡು ಮಾಡಬಲ್ಲ ಜುಗಾರಿ ಅಡ್ಡೆಗಳು ತಲೆ ಎತ್ತುತ್ತಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಅಕ್ಷಿತ್ ಶೆಟ್ಟಿ ಹೆರ್ಗ ಆತಂಕ ವ್ಯಕ್ತ ಪಡಿಸಿದ್ದಾರೆ.
. ಮಣಿಪಾಲಕ್ಕೆ ದೇಶವಿದೇಶಗಳವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ ಅದಕ್ಕೆ ತನ್ನದೇ ಆದ ಮಾನ್ಯತೆ ಇದೆ. 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತಿದ್ದಾರೆ. ಈ ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾದಕದ್ರವ್ಯ ಜಾಲ, ಜುಗಾರಿ ಅಡ್ಡೆಗಳು ನಾಯಿಕೊಡೆಗಳಂತೆ ಅಲ್ಲಲ್ಲಿ ತೆಲೆ ಎತ್ತುತ್ತಿವೆ. ಹಳೆಯ ಇಸ್ಟೀಟು ಆಟವನ್ನೇ ಆಧುನಿಕ ರೂಪದಲ್ಲಿ ವಿದ್ಯಾರ್ಥಿಗಳ ಮುಂದಿಟ್ಟು ಸಾವಿರಾರು ರೂ. ಪ್ರವೇಶ ಶುಲ್ಕ ಪಡೆದು ಇಲ್ಲಿ ಮಕ್ಕಳನ್ನು ಜೂಜು ಆಡುವಂತೆ ಪ್ರೇರೇಪಿಸ ಲಾಗುತ್ತಿದೆ ಎಂದವರು ಹೇಳಿದ್ದಾರೆ.
ಒಮ್ಮೆ ಈ ಆಟದ ಚಟಕ್ಕೆ ಬಿದ್ದರೆ ಮತ್ತೆ ವಿದ್ಯಾರ್ಥಿಗಳು ಇದರಿಂದ ಹೊರ ಬರುವುದು ಸಾಧ್ಯವಿಲ್ಲ. ಅಕ್ರಮಗಳ ಕೇಂದ್ರ ಸ್ಥಾನವಾಗಿರುವ ಇಂಥ ಹಲವಾರು ಅಡ್ಡೆಗಳು ಕಾರ್ಯಚರಿಸುತ್ತಿವೆ. ಇದರ ಹಿಂದೆ ರಾಜಕೀಯ ಶಕ್ತಿಗಳ ಒತ್ತಡವೂ ಇರುವ ಸಾಧ್ಯತೆ ಇದೆ. ಸ್ಥಳೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾದಕ ವಸ್ತುಗಳ ಮಾರಾಟ ಜಾಲವೂ ಕಾರ್ಯನಿರ್ವಹಿಸುತ್ತಿದೆ.
ಯುವ ಸಮುದಾಯದ ಬಗ್ಗೆ ಕಾಳಜಿ ತೋರಬೇಕಿರುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕೈ ಕಟ್ಟಿ ಕುಳಿತಿರುವುದನ್ನು ನಗರ ಬಿಜೆಪಿ ಯುವ ಮೋರ್ಚಾ ಉಗ್ರವಾಗಿ ಖಂಡಿಸುತ್ತದೆ. ಮುಂದಿನ ಒಂದು ವಾರದೊಳಗೆ ಇಂಥ ಜೂಜು ಕೇಂದ್ರಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮುಚ್ಚಿ ಅದರ ಹಿಂದಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ತಪ್ಪಿದರೆ ನಗರ ಯುವ ಮೋರ್ಚಾ ವತಿಯಿಂದ ಅಂತಹ ಅಡ್ಡೆಗಳ ಮುಂಭಾಗದಲ್ಲೇ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.