ಸದ್ಯ ಟೋಲ್ ಸಂಗ್ರಹ ಬೇಡ: ಸಚಿವ ಖಾದರ್ ಆಗ್ರಹ
ಮಂಗಳೂರು, ಫೆ. 11: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಸರಿಯಲ್ಲ. ಆದ್ದರಿಂದ ಸದ್ಯ ಟೋಲ್ ಸಂಗ್ರಹವನ್ನು ರದ್ದುಪಡಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತೊಕ್ಕೊಟ್ಟು-ತಲಪಾಡಿ ಹೆದ್ದಾರಿಯಲ್ಲಿ ಮೇಲ್ಸೇತುವೆ ರಚನೆ, ಸಂಪರ್ಕ ರಸೆತಿ ಕಾಮಗಾರಿ ಪೂರ್ತಿಯಾಗಿಲ್ಲ. ಶೇ.80 ಕಾಮಗಾರಿ ಮುಕ್ತಾಯಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗುತ್ತಿಗೆದಾರರು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಆದ್ದರಿಂದ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಬಾರದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಕೇಂದ್ರ ಸರಕಾರದ ಗಮನವನ್ನು ಸೆಳೆಯಲಾಗಿದೆ ಎಂದರು.
ಟೋಲ್ ಸಂಗ್ರಹಕ್ಕೆ ಭಾರೀ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೋರಾಟ ಸಮಿತಿ ಸದಸ್ಯರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವ, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಕಾಂತರಾಜು, ಉಪ ಪೊಲೀಸ್ ಆಯುಕ್ತ ಕೆ.ಎಂ.ಶಾಂತರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಸಚಿವರು ನುಡಿದರು.
ಟೋಲ್ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಫೆ.25ರವರೆಗೆ ಸಂಚಾರ ಉಚಿತವಾಗಿರುತ್ತದೆ. ಆ ಭಾಗದ ವಾಹನಗಳ ಮಾಲಕರು ವಾಸ್ತವ್ಯದ ಬಗ್ಗೆ ಆಧಾರ ಕಾರ್ಡ್ ನೀಡಬೇಕು. ಕಂಪೆನಿ ಆ ಮಾಹಿತಿ ಆಧಾರದ ಮೇಲೆ ನಿರ್ಧಾರವನ್ನು ಫೆ.25ರ ಸಭೆಯಲ್ಲಿ ಪ್ರಕಟಿಸಬೇಕು ಎಂದು ಸಭೆ ಅಭಿಪ್ರಾಯಪಟ್ಟಿದೆ ಎಂದು ಖಾದರ್ ನುಡಿದರು.
20 ಕಿ.ಮೀ. ವ್ಯಾಪ್ತಿಯೊಳಗೆ ನಾನ್-ಕಮರ್ಷಿಯಲ್ ವಾಹನಗಳಿಗೆ 235 ರೂ. ಮಾಸಿಕ ಪಾಸ್ ನೀಡುವುದು. ಟೋಲ್ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿ ಸಮವಸ್ತ್ರ ಧರಿಸುವುದು. ಗುರುತಿನ ಚೀಟಿಯನ್ನು ಹಾಕಿಕೊಳ್ಳುವುದು. ಟೋಲ್ ಸಿಬ್ಬಂದಿಗೆ ಉತ್ತಮ ಗುಣನಡತೆಯ ಬಗ್ಗೆ ತರಬೇತಿ ನೀಡುವುದು. ದುರ್ನಡತೆ ಕಂಡುಬಂದರೆ ಕೆಲಸದಿಂದ ತೆಗೆದುಹಾಕುವುದು ಮೊದಲಾದವುಗಳನ್ನು ಎಲ್ಲ ಟೋಲ್ ಗೇಟ್‌ಗಳಲ್ಲಿ ಅನುಷ್ಠಾನಕ್ಕೆ ತರುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದರು.
ಶೀಘ್ರದಲ್ಲೇ ಅಧಿಕಾರಿಗಳ ಸಭೆ
ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಪಿಡಿಒ ಹಾಗೂ ತಾ.ಪಂ. ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಸಚಿವ ಖಾದರ್ ಹೇಳಿದರು.
ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕು ಇದೆ. ಇದಕ್ಕೆ ಪರ್ಯಾಯವಾಗಿ ಪಶ್ಚಿಮ ವಾಹಿನಿ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಮುಂಬರುವ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂ. ಹಣ ಮೀಸಲಿಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.