ಮನುಕುಲದ ಹಿತ ಸಾಹಿತ್ಯದ ಪ್ರಮುಖ ಗುರಿ- ಡಾ.ವಸಂತ ಕುಮಾರ್ ಪೆರ್ಲ
ಮಂಗಳೂರು,ಫೆ.11:ಮನುಕುಲದ ಹಿತ, ಸಾಹಿತ್ಯದ ಪ್ರಮುಖ ಗುರಿಯಾಗಿದೆ ಎಂದು ಹಿರಿಯ ಕವಿ ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ತಿಳಿಸಿದ್ದಾರೆ.
ಭೂಮಿಗೀತ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಚಂದ್ರಾವತಿಯವರ ಅಮೃತ ವರ್ಷ ಕೃತಿಯನ್ನು ನಗರದ ಡಾನ್ ಬಾಸ್ಕೋ ಮಿನಿ ಸಭಾಂಗಣದಲ್ಲಿ ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತ್ಯದಲ್ಲಿ ಎಡ ಮತ್ತು ಬಲ ಎಂಬುವುದಿಲ್ಲ ಕಲ್ಯಾಣ ರಾಜ್ಯದ ಸ್ಥಾಪನೆ ಸಾಹಿತ್ಯದ ಉದ್ದೇಶವಾಗಿದೆ.ಸಾಹಿತ್ಯಕವಾದ ಭಿನ್ನಾಭಿಪ್ರಾಯಗಳು ಸಾರ್ವಜನಿಕ ವೇದಿಕೆಗಳಲ್ಲಿ ಜಗಳದ ವಿಷಯಗಳಾಗಬಾರದು ಎಂದು ಡಾ.ವಸಂತಕುಮಾರ್ ಪೆರ್ಲ ತಿಳಿಸಿದರು.
ಜಿಲ್ಲೆಯಲ್ಲಿರುವ ಮಹಿಳಾ ಕವಿಗಳು ಸಾಹಿತಿಗಳನ್ನು ಸಮರ್ಪಕವಾಗಿ ಗುರುತಿಸುವ ಕೆಲಸ ಆಗಿಲ್ಲ ಆದರೂ ಅವರು ಅವರ ಪಾಡಿಗೆ ತಮ್ಮ ಸಾಹಿತ್ಯ ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಬಿ.ಎಂ.ರೋಹಿಣಿ ತಿಳಿಸಿದ್ದಾರೆ.
ಬದುಕಿನ ಎಲ್ಲಾ ಜಂಜಡತೆಗಳ ನಡುವೆ ಸಂತಸವನ್ನು ಸಮತೋಲವನ್ನು ತಂದು ಕೊಡುವ ಶಕ್ತಿ ಸಾಹಿತ್ಯಕ್ಕಿದೆ .ಆದುನಿಕ ಮೊಬೈಲ್ ಸೆಟ್‌ಗಳು,ಇನ್ನಿತರ ಪರಿಕರಗಳಿಂದ ಈ ರೀತಿಯ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅತಿಥಿ ಭುವನೇಶ್ವರಿ ಹೆಗಡೆ ತಿಳಿಸಿದ್ದಾರೆ.ಕವಿಗಳ ಕವಿತೆಗಳು ಸುಳ್ಳುಗಳಿಂದ ಕೂಡಿದ್ದರೂ ಅದು ಯಾರ ಜೀವವನ್ನು ತೆಗೆಯುವ ಸುಳ್ಳು ಆಗಿರುವುದಿಲ್ಲ.ಆ ಕಲ್ಪನಾ ಲೋಕದಲ್ಲಿ ಒಂದು ಆದರ್ಶದ ಚಿತ್ರಣ ವಿರುತ್ತದೆ ಎಂದು ಭುವನೇಶ್ವರಿ ಹೆಗಡೆ ತಿಳಿಸಿದ್ದಾರೆ.ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿದ್ದರು.
ಇದೇ ಸಮದರ್ಭದಲ್ಲಿ ರಮೇಶ್ ಕೆದಿಲಾಯರ ಅಧ್ಯಕ್ಷತೆಯಲ್ಲಿ ಕವಿಗೊಷ್ಠಿ ನಡೆಯಿತು.ಶಶಿಲೇಖ ಬಿ,ಬದ್ರುದ್ದೀನ್ ಕೂಳೂರು,ಅರ್ಥಾಪೆರ್ಲ,ಶೈಲಾ ಕುಮಾರಿ,ಗಜಾನನ ಮೂರ್ತಿ ,ಶಾರದ ಎಸ್ ಶೆಟ್ಟಿ,ಚಂದ್ರಾವತಿ ಕವನ ವಾಚಿಸಿದರು.ಆಯನಾ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.