ಟೋಲ್ ಸಂಗ್ರಹ: ಜಿಲ್ಲಾಡಳಿತದ ಕ್ರಮಕ್ಕೆ ಸ್ಥಳೀಯರ ತೀವ್ರ ಆಕ್ರೋಶ

Update: 2017-02-11 15:35 GMT

ಸಾಸ್ತಾನ, ಫೆ.10: ಸ್ಥಳೀಯರ ಪ್ರತಿಭಟನೆ, ವಿರೋಧವನ್ನು ಲೆಕ್ಕಿಸದೇ, ಜನರಿಗೆ ಯಾವುದೇ ಮಾಹಿತಿ ನೀಡದೇ ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಗುಂಡ್ಮಿ ಟೋಲ್‌ಗೇಟ್‌ನಲ್ಲಿ ನಿನ್ನೆಯಿಂದ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಿದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟಿಸಿದ ನೂರಾರು ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದರು.

  ಸಾಸ್ತಾನಗುಂಡ್ಮಿಯ ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ಮತ್ತು ಇನ್ನಿತರ ಬೇಡಿಕೆಗೆ ಬೆಲೆ ನೀಡದೆ ಟೋಲ್ ಆರಂಭಿಸಿರುವುದನ್ನು ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಪ್ರತಿಭಟಿಸಿ ದರು. ಟೋಲ್‌ಗೇಟ್ ಪರಿಸರದ ಎರಡು ಕಿ.ಮೀ.. ವ್ಯಾಪ್ತಿಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೂಡ ಅದನ್ನು ಧಿಕ್ಕರಿಸಿದ ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನಕಾರರು ಸಾಸ್ತಾನದ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಲು ಹೊರಟಾಗ ಸಾಸ್ತಾನ ಪೇಟೆಯಲ್ಲಿಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರತಿಭಟನಾಕಾರರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡರು.

ಗುರುವಾರ ಮಧ್ಯರಾತ್ರಿಯಿಂದ ಜಿಲ್ಲೆಯ ಸಾಸ್ತಾನ ಗುಂಡ್ಮಿ ಹಾಗೂ ಹೆಜಮಾಡಿ ಟೋಲ್‌ಗೇಟ್‌ಗಳಲ್ಲಿ ಟೋಲ್ ಸಂಗ್ರಹಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಿಸಿದ್ದು, ಇದನ್ನು ಖಂಡಿಸಿ ಇಂದು ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸುವುದಾಗಿ ಸಮಿತಿ ಘೋಷಿಸಿತ್ತು.ಈ ಹಿನ್ನೆಲೆಯಲ್ಲಿ ಟೋಲ್‌ಗೇಟ್‌ಗೆ ಪೊಲೀಸರು ವಿಶೇಷ ಭದ್ರತೆಯನ್ನು ನೀಡಿದ್ದರು.

ಟೋಲ್ ಸಂಗ್ರಹಕ್ಕೆ ಹೆಜಮಾಡಿ ಮತ್ತು ಸಾಸ್ತಾನ ಜನರ ವಿರೋಧ ಹೆಚ್ಚುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ ನಿನ್ನೆ ಸಂಜೆ 6:00ಗಂಟೆಯಿಂದ ಫೆ.15ರ ಮಧ್ಯರಾತ್ರಿಯವರೆಗೆ ಟೋಲ್‌ಗೇಟ್ ಪರಿಸರದ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿತ್ತು.

ಪರಿಸರದ ಜನರ ಆಕ್ರೋಶದ ಅರಿವಿದ್ದ ಪೊಲೀಸರು ಇಂದು ಭಾರೀ ಪೊಲೀಸರನ್ನು ಟೋಲ್‌ಗೇಟ್ ಬಳಿ ನಿಯುಕ್ತಿಗೊಳಿಸಿದ್ದರು. 40 ಮಹಿಳಾ ಕಾನ್‌ಸ್ಟೇಬಲ್ ಸೇರಿದಂತೆ ಸುಮಾರು 200 ಮಂದಿ ಪೊಲೀಸ್ ಸಿಬ್ಬಂದಿಗಳು, ನಾಲ್ಕು ತುಕುಡಿ ಡಿಎಆರ್, ನಾಲ್ವರು ಎಸ್‌ಐಗಳು, ಮೂವರು ಇನ್ಸ್‌ಪೆಕ್ಟರ್, ಒಬ್ಬರು ಡಿವೈಎಸ್ಪಿ ಹಾಗೂ ಸ್ವತಹ ಎಎಸ್‌ಪಿ ವಿಷ್ಣುವರ್ಧನ್ ಸ್ಥಳದಲ್ಲಿದ್ದರು.

ಶನಿವಾರ ಬೆಳಗ್ಗೆ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ ಹೆದ್ದಾರಿ ಜಾಗೃತಿ ಸಮಿತಿ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪರಿಸರದ ಗ್ರಾಮಸ್ಥರು, ಹೆದ್ದಾರಿ ಬಳಕೆದಾರರು ಸ್ಥಳದಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.

ಈ ಸಂದರ್ಭ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಅಚ್ಚುತ ಪೂಜಾರಿ, ಮಾಜಿ ಜಿಪಂ ಸದಸ್ಯ ಶಂಕರ್ ಕುಂದರ್, ಹೋರಾಟ ಸಮಿತಿಯ ಅಲ್ವಿನ್ ಅಂದಾದ್ರೆ, ಸ್ಥಳೀಯ ಗ್ರಾಪಂ ಅಧ್ಯಕ್ಷರಾದ ಗೋವಿಂದ ಪೂಜಾರಿ, ಮೋಸೆಸ್ ರೊಡ್ರಿಗಸ್ ಮತ್ತಿರರು ಉಪಸ್ಥಿತರಿದ್ದರು.

ಸಭೆ ನಡೆಸಿದ ಬಳಿಕ ಪ್ರತಿಭಟನಾಕಾರರು ಕಾಲ್ನಡಿಗೆಯ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬಂದು ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸಲು ಮುಂದಾದರು. ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಕಾರರು ಸಾಸ್ತಾನದ ಬಸ್‌ನಿಲ್ದಾಣದ ಬಳಿ ಬಂದಾಗ, ಅವರನ್ನು ಅಲ್ಲೇ ಅಡ್ಡಗಟ್ಟಿದ ಪೊಲೀಸರು ನಿಷೇಧಾಜ್ಞೆ ಇರುವುದರಿಂದ ಚದುರುವಂತೆ ಸೂಚನೆಗಳನ್ನು ನೀಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಕಾರರು ರಾ.ಹೆದ್ದಾರಿಯಲ್ಲೇ ಧರಣಿ ಕುಳಿತು ಜೋರಾಗಿ ಘೋಷಣೆಗಳನ್ನು ಕೂಗಿದರು.

ಆಗ ಪೊಲೀಸರು ಮುನ್ನುಗಿ ಜಿಲ್ಲಾಡಳಿತ ಮತ್ತು ಟೋಲ್ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುತಿದ್ದ ಪ್ರತಿಭಟನಕಾರರನ್ನು ಎತ್ತಿ ಅವರಿಗಾಗಿ ಕಾದಿದ್ದ ರಾಜ್ಯ ಸಾರಿಗೆ ಬಸ್‌ಗಳೊಳಗೆ ದಬ್ಬಿದರು. 20ಕ್ಕೂ ಅಧಿಕ ಮಹಿಳಾ ಪ್ರತಿಭಟನಕಾರರನ್ನು ಸಹ ಬಂಧಿಸಲಾಯಿತು. ಎಎಸ್ಪಿ ವಿಷ್ಣುವರ್ಧನ್ ಅವರೇ ಇದರ ನೇತೃತ್ವ ವಹಿಸಿದ್ದರು. ಬಂಧಿತರಲ್ಲಿ 70 ಮಂದಿ ಪುರುಷರು ಹಾಗೂ 20 ಮಂದಿ ಮಹಿಳೆಯರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ 4 ಬಸ್‌ಗಳ ಮೂಲಕ ಸಾಗಿಸಿ ಬ್ರಹ್ಮಾವರದ ಧರ್ಮಾವರಂ ಅಡಿಟೋರಿಯಂನಲ್ಲಿ ಇರಿಸಿದರು. ಅವರ ವಿರುದ್ಧ ಯಾವುದೇ ಕೇಸು ದಾಖಲಿಸದೇ ಹೆಸರುಗಳನ್ನು ದಾಖಲಿಸಿಕೊಂಡು ಅಪರಾಹ್ನದ ಬಳಿಕ ಬಿಡುಗಡೆಗೊಳಿಸಿದರು.

ಟೋಲ್ ಸಂಗ್ರಹಕ್ಕೆ ಜಿಲ್ಲೆಯಲ್ಲಿ ತಾರತಮ್ಯ ಮಾಡ್ತಾ ಇದ್ದಾರೆ. ಉಳಿದೆಡೆಗಳಲ್ಲಿ ಸ್ಥಳೀಯರಿಗೆ ಟೋಲ್ ಇಲ್ಲ. ಇಲ್ಲಿ ಮಾತ್ರ ಹಾಕ್ತಾ ಇದ್ದಾರೆ. ಕನಿಷ್ಠ 60 ಕಿ.ಮೀ.ಗೆ ಒಂದು ಟೋಲ್‌ಗೇಟ್ ಇರಬೇಕು. ಆದರೆ ಇಲ್ಲಿಂದ 35 ಕೆ.ಮೀ.ದೂರದಲ್ಲಿ ಹೆಜಮಾಡಿಯಲ್ಲಿ, ಅಲ್ಲಿಂದ 15 ಕಿ.ಮೀ. ದೂರದ ಸುರತ್ಕಲ್‌ನಲ್ಲಿ ಟೋಲ್‌ಗೇಟ್. ಇದಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲ. ಜಿಲ್ಲಾಧಿಕಾರಿಗಳೇ ಇದಕ್ಕೆ ಉತ್ತರಿಸಿ

-ಸಂತೋಷಕುಮಾರ ಶೆಟ್ಟಿ, ಸ್ಥಳೀಯ.

ಇಲ್ಲಿ ಪ್ರಶ್ನೆ ಕೇಂದ್ರ ಸರಕಾರದ್ದೊ, ರಾಜ್ಯ ಸರಕಾರದ್ದೊ ಅಲ್ಲ. ಮೊನ್ನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ತೀರ್ಮಾನದಂತೆ ತಜ್ಞರು ವರದಿ ನೀಡಿದ್ದಾರೆ. ಅದರಂತೆ ಇಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ, ಸರ್ವಿಸ್ ರಸ್ತೆ ಆಗಿಲ್ಲ, ಒಳಚರಂಡಿ, ದೀಪದ ವ್ಯವಸ್ಥೆ ಆಗಿಲ್ಲ. ಆದರೂ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ವಿಧಿಸಿ ಟೋಲ್ ಸಂಗ್ರಹಕ್ಕೆ ಮುಂದಾಗುತ್ತಾರೆ. ಇವರು ಮೊದಲು ಎಲ್ಲಾ ಸೇವೆಗಳನ್ನು ಒದಗಿಸಲಿ, ಸ್ಥಳೀಯರಿಗೆ ರಿಯಾಯಿತಿ ಕೊಡಲಿ. ಅಲ್ಲಿಯವರೆಗೆ ಸ್ಥಳೀಯರ ಹೋರಾಟಕ್ಕೆ ನಮ್ಮ ಬೆಂಬಲವಿದ್ದೆ ಇರುತ್ತದೆ.

- ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ

ಇಂದು ನಮ್ಮದು ಸಾಂಕೇತಿಕ ಪ್ರತಿಭಟನೆ. ಇದರ ಕಿಚ್ಚು ಫೆ.13ರಂದು ಕರೆ ಕೊಟ್ಟಿರುವ ಜಿಲ್ಲಾ ಬಂದ್‌ನಲ್ಲಿ ಪ್ರಜ್ವಲಿಸಲಿದೆ. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಯಾವ ಜಿಲ್ಲಾಡಳಿತಕ್ಕೂ ಸಾಧ್ಯವಿಲ್ಲ. ಅಂದು ಬಸ್,ರಿಕ್ಷಾ, ಟ್ಯಾಕ್ಸಿ ಶಾಲಾ ಕಾಲೇಜುಗಳ ಬಂದ್‌ಗೆ ಮನವಿ ಮಾಡುತ್ತೇವೆ.

-ವಿದ್ಯಾರ್ಥಿ ಮುಖಂಡ

ಟೋಲ್ ಸಂಗ್ರಹಕ್ಕೆ ನಮ್ಮ ವಿರೋಧ ವ್ಯಕ್ತಪಡಿಸಲು ಇರುವ ಮಾರ್ಗ ಪ್ರತಿಭಟನೆ. ಅದನ್ನು ನಡೆಸಲು ಅವಕಾಶ ನೀಡದ ಜಿಲ್ಲಾಡಳಿತದ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ. ಕಂಪೆನಿ ಎಲ್ಲಾ ವ್ಯವಸ್ಥೆ,ಸೌಲಭ್ಯಗಳನ್ನು ಕಲ್ಪಿಸಿ ಟೋಲ್ ಸಂಗ್ರಹಿಸಲಿ.

-ಕಿಶೋರ್‌ಕುಮಾರ್ ಕುಂದಾಪುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News