×
Ad

ಕೊಂಕಣಿಗರದ್ದು ಸರ್ವ ಧರ್ಮ ಸಮನ್ವಯತೆ: ನಳಿನ್

Update: 2017-02-11 21:49 IST

ಮಂಗಳೂರು, ಫೆ. 11: ಕೊಂಕಣಿಗರು ಅಳವಡಿಸಿಕೊಂಡಿರುವ ಸರ್ವಧರ್ಮ ಸಮನ್ವಯದ ಚಿಂತನೆ ಕರಾವಳಿಗರಿಗೆ ಅಗತ್ಯವಾಗಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಅವರು ನಗರದ ಪುರಭವನದಲ್ಲಿ ನಡೆಯುತ್ತಿರುವ ಕೊಂಕಣಿ ಲೋಕೋತ್ಸವದ ಎರಡನೆ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  ಕೊಂಕಣಿ ಜನರ ಸೌಮ್ಯತೆ, ಶಿಸ್ತುಬದ್ಧತೆಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಎಲ್ಲ ಧರ್ಮ, ಜಾತಿ, ಭಾಷಿಗರ ಜನರು ಒಗ್ಗಟ್ಟಿನಿಂದ ಬದುಕುವಂತಾಗಲು ಈ ಲೋಕೋತ್ಸವ ನಾಂದಿಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ರಿಜಿಸ್ಟ್ರಾರ್ ಡಾ. ಬಿ. ದೇವದಾಸ್ ಪೈ, ಪತ್ರಕರ್ತ ಮನೋಹರ್ ಪ್ರಸಾದ್, ಉದ್ಯಮಿ ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು.

ಯುವಜನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳ ತಂಡಗಳಿಂದ ಸಾಂಸ್ಕೃತಿಕ ವೈವಿಧ್ಯದ ಸ್ಪರ್ಧೆ ನಡೆಯಿತು. ಅಂಕೋಲಾದ ಸಿದ್ಧಿ ಜನರ ತಂಡದಿಂದ ನೃತ್ಯ, ಮುಂಡಗೋಡಿನ ಸಿದ್ಧಿಗಳಿಂದ ದಮ್ಮಾಮ್ ನೃತ್ಯ, ಸಾಧನಾ ಬಳಗದ ಭಾವನಾ ಶೆಣೈ ಮತ್ತು ತಂಡದವರಿಂದ ನೃತ್ಯ ರೂಪಕ ಪ್ರದರ್ಶಿತವಾಯಿತು. ಆನಂತರ ಹಲವು ಗಾಯಕರಿಂದ ಭಾವಗೀತೆಗಳ ಗಾಯನ ನಡೆಯಿತು.

ನಗರದ ಕೆನರಾ ಕಾಲೇಜು, ಪದುವಾ ಕಾಲೇಜ್ ಆಫ್ ಕಾಮರ್ಸ್, ಅಲೋಶಿಯಸ್ ಕಾಲೇಜು, ರೊಸಾರಿಯೋ ಕಾಲೇಜು, ಪೊಂಪೆ ಕಾಲೇಜು ಐಕಳ, ಮಿಲಾಗ್ರಿಸ್ ಕಾಲೇಜುಗಳ ವಿದ್ಯಾರ್ಥಿಗಳಿಂದ ಸುಂದರ ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನ ನಡೆಯಿತು. ಈ ಸ್ಪರ್ಧೆಗಳಲ್ಲಿ ಪ್ರತಿಭಾವಂತ ತಂಡ ಪ್ರಶಸ್ತಿಯನ್ನು ಪದುವಾ ಕಾಲೇಜು, ಅತ್ಯುತ್ತಮ ತಂಡ ಪ್ರಶಸ್ತಿಯನ್ನು ಸೇಂಟ್ ಅಲೋಶಿಯಸ್ ಕಾಲೇಜು ಪಡೆಯಿತು. ಉತ್ತಮ ತಂಡ ಪ್ರಶಸ್ತಿಯನ್ನು ಮಿಲಾಗ್ರಿಸ್ ಕಾಲೇಜು ಪಡೆದುಕೊಂಡಿತು.

ಕೊಂಕಣಿ ಕ್ವಿಜ್‌ನಲ್ಲಿ ಪ್ರಥಮ ಸ್ಥಾನವನ್ನು ವಿಶ್ವವಿದ್ಯಾಲಯ ಸಂಧ್ಯಾಕಾಲೇಜು ತಂಡ, ದ್ವಿತೀಯ ಸ್ಥಾನವನ್ನು ಸೈಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜು ಹಾಗೂ ತೃತೀಯ ಸ್ಥಾನವನ್ನು ಐಕಳ ಪೊಂಪೆ ಕಾಲೇಜು ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News