ಸ್ವಾಮಿ ವಿವೇಕಾನಂದ, ನಿವೇದಿತಾರ ಚಿಂತನೆ ಅಳವಡಿಸಿಕೊಳ್ಳಿ : ಯುವ ಜನತೆಗೆ ಸ್ವಾಮಿ ನಿಖಿಲೇಶ್ವರನಂದಜಿ ಕರೆ
ಮಂಗಳೂರು, ಫೆ. 11: ಸ್ವಾಮಿ ವಿವೇಕಾನಂದರಂತೆಯೇ ಸೋದರಿ ನಿವೇದಿತಾರವರು ಕೂಡ ದೇಶಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದು, ಇವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಬರೋಡಾ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿಖಿಲೇಶ್ವರನಂದಜಿ ಮಹಾರಾಜ್ ಯುವ ಜನತೆಗೆ ಕರೆ ನೀಡಿದ್ದಾರೆ.
ಯುವ ಬ್ರಿಗೇಡ್ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡ ಎರಡು ದಿನಗಳ ಸ್ವಾಮಿ ವಿವೇಕಾನಂದ ಅಕ್ಕ -ನಿವೇದಿತಾ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯದ ಪ್ರಚಾರವಾದಂತೆ ಜಾಗೃತಿಯೂ ಹೆಚ್ಚಾಗುತ್ತದೆ. ಇದರಿಂದ ಜನರಲ್ಲಿ ಸೇವಾ ಮನೋಭಾವನೆ ಬೆಳೆಯುತ್ತದೆ. ಆದ್ದರಿಂದ ಯುವ ಜನಾಂಗ ವಿವೇಕಾನಂದರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದರು.
ಗದಗ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದಜೀ ಮಾತನಾಡಿ, ಬರಹಗಳೆಲ್ಲವೂ ಸಾಹಿತ್ಯ ಆಗಲಾರದು. ಸಾಹಿತ್ಯವೆಂದರೆ ವೌಲ್ಯಗಳನ್ನು ಎತ್ತಿ ಹಿಡಿಯುವಂತಾಗಬೇಕು. ಮಾನಸಿಕ ಸಂತಪ್ತಿ ನೀಡುವುದೇ ಸಾಹಿತ್ಯ. ಆದ್ದರಿಂದ ವಿವೇಕಾನಂದರನ್ನು ಮೀರಿದ ಸಾಹಿತ್ಯ ಬೇರೆ ಇಲ್ಲ ಎಂದರು.
ಇದೇ ಸಂದರ್ಭ ಸೋದರಿ ನಿವೇದಿತಾ ಪ್ರತಿಷ್ಠಾನದ ಪ್ರಿಯಾ ಶಿವಮೊಗ್ಗ ಅವರು ಬರೆದ ಗುರು ಶಿಷ್ಯೆ ಹಾಗೂ ನಿತ್ಯಾನಂದ ವಿವೇಕವಂಶಿ ಅವರು ಬರೆದ ಸಾಗರದಾಚೆ ವಿವೇಕಾನಂದ ಪುಸ್ತಕ ಬಿಡುಗಡೆಗೊಂಡಿತು. ಸಮ್ಮೇಳನಾಧ್ಯಕ್ಷೆ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ, ವಿವೇಕ ಚೈತನ್ಯ ಮಹಾರಾಜ್, ಸಮ್ಮೇಳನದ ಸಂಚಾಲಕ ಗಿರಿಧರ ಶೆಟ್ಟಿಘಿ, ಯುವಬ್ರಿಗೇಡ್ ರಾಜ್ಯ ಸಂಚಾಲಕ ನಿತ್ಯಾಂದ ವಿವೇಕ ವಂಶಿ ಉಪಸ್ಥಿತರಿದ್ದರು.
ಯುವಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಸ್ವಾಗತಿಸಿದರು. ಮಂಜಯ್ಯ ನೇರೆಂಕಿ ವಂದಿಸಿದರು. ವಿಕ್ರಮ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ವಿವೇಕ-ನಿವೇದಿತಾರ ಪ್ರಕಟಿತ ಸಾಹಿತ್ಯಗಳ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು. ಈ ಜಾಥಾಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಚಾಲನೆ ನೀಡಿದರು. ಯುವಕರ ತಂಡ ಈ ಪಲ್ಲಕಿಯನು್ನ ಹೊತ್ತು ಮೈದಾನದತ್ತ ಸಾಗಿತು.
ಗಮನ ಸೆಳೆದ ವಿವೇಕಾನಂದರ ಕೊಲಾಜ್
ಸಮ್ಮೇಳನದಲ್ಲಿ 21 ಅಡಿ ಎತ್ತರ ಮತ್ತು 16 ಅಡಿ ಅಗಲ ವಿಸ್ತೀರ್ಣದ ಸ್ವಾಮಿ ವಿವೇಕಾನಂದರ ಕೊಲಾಜ್ ನೆರೆದವರ ಗಮನ ಸಳೆಯಿತು.