ಅಣೆಕಟ್ಟು ನಿರ್ಮಾಣಕ್ಕೆ ಸರಕಾರ ಒತ್ತು: ಸಚಿವ ರೈ
ಬಂಟ್ವಾಳ, ಫೆ. 11: ಅಂತರ್ಜಲ ಸಂರಕ್ಷಣೆಗೆ ಹೆಚ್ಚು ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ನದಿಗಳಿಗೆ ಅಣೆಕಟ್ಟು, ಕಿಂಡಿಅಣೆಕಟ್ಟುಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸಜಿಪಮೂಡ ಗ್ರಾಮದ ಕಲ್ಲಗುಂಡಿ ಎಂಬಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಿಂಡಿಅಣೆಕಟ್ಟು ಕಾಮಗಾರಿಗೆ ಶನಿವಾರ ಸಂಜೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ತುಂಬೆಯ ನೂತನ ವೆಂಟೆಡ್ ಡ್ಯಾಂನಲ್ಲಿ ನೀರು ಸಂಗ್ರಹ ಆರಂಭವಾದ ಬಳಿಕ ನದಿ ತಟದ ಕೃಷಿಕರಿಗೆ ಹೆಚ್ಚು ಅನುಕೂಲವಾಗಿದೆ. ಇದರಿಂದ ನಮ್ಮ ತಾಲೂಕಿನಲ್ಲಿ ಅಂತರ್ಜಲಮಟ್ಟದ ಏರಿಕೆಗೂ ನೆರವಾಗಿದೆ ಎಂದರು.
ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಮಾತನಾಡಿ, ಗ್ರಾಮಸ್ಥರ ಬಹುಕಾಲದ ಬೇಡಿಕೆಯಂತೆ ಸಜಿಪಮೂಡ ಹಾಗೂ ಅಮ್ಟೂರು ಗ್ರಾಮಗಳನ್ನು ಸಂಪರ್ಕಿಸುವ ಈ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಈ ಅಣೆಕಟ್ಟಿನಲ್ಲಿ ನಾಲ್ಕು ಚಕ್ರದ ವಾಹನಗಳ ಸಂಚಾರಕ್ಕೂ ಅವಕಾಶ ಒದಗಿಸಿ ಯೋಜನೆ ರೂಪಿಸಲಾಗಿದೆ ಎಂದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಸಂಜೀವ ಪೂಜಾರಿ, ಗ್ರಾಪಂ ಅಧ್ಯಕ್ಷ ಗಣಪತಿಭಟ್, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಎಪಿಎಂಸಿ ಸದಸ್ಯ ಪದ್ಮನಾಭ ರೈ, ಎಂಜಿನಯರ್ ಪ್ರಸನ್ನ, ವಿಶ್ವನಾಥ ಬೆಳ್ಚಡ, ಗ್ರಾಮಪಂಚಾಯತ್ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.