ಆಳ್ವಾಸ್ ಎಂಜಿನಿಯರಿಂಗ್ ಸಹಿತ ವಿವಿಧ ಕಾಲೇಜುಗಳ ಕ್ರೀಡಾಕೂಟ
ಮೂಡುಬಿದಿರೆ,ಫೆ.11: ರಾಜೀವ ಗಾಂಧಿ ಆ.ವಿ.ವಿ.ಗೆ ಸಂಯೋಜಿತ ಆಳ್ವಾಸ್ ಕಾಲೇಜು, ಇನ್ಸ್‌ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಆಳ್ವಾಸ್ ಇ ನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾಕೂಟ ಮೂಡಬಿದಿರೆ ಸ್ವರಾಜ್ಯ ಮೈದಾನದಲ್ಲಿ ಶನಿವಾರ ಜರಗಿತು.
ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್‌ನ ಅಧೀಕ್ಷಕ, ಆಥ್ಲೆಟಿಕ್ ಕೋಚ್ ದಿನೇಶ್ ಕುಂದರ್ ಉದ್ಘಾಟಿಸಿದರು.
ಕ್ರೀಡಾಳುಗಳ ಸಹಿತ ಸುಮಾರು ಐದು ಸಾವಿರ ಕ್ರೀಡಾಳುಗಳ ಆಕರ್ಷಕ ಪಥಸಂಚಲನದ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಮೂರು ದಶಕಗಳಿಂದ ನಿರಂತರವಾಗಿ ಕ್ರೀಡಾಕ್ಷೇತ್ರದಲ್ಲಿ ದೂರಗಾಮಿ ಚಿಂತನೆಯಿಂದ ಕಾರ್ಯನಿರ್ವಹಿಸುತ್ತಿರುವ ಡಾ. ಮೋಹನ ಆಳ್ವರು ಇಂದು 800 ಮಂದಿ ಕ್ರೀಡಾಳುಗಳ ಶಿಕ್ಷಣವನ್ನು, ಕ್ರೀಡಾ ತರಬೇತಿಯೊಂದಿಗೆ ಪ್ರಾಯೋಜಿಸುತ್ತ ನಾಡಿಗೆ ಭರವಸೆ ಮೂಡಿಸಬಲ್ಲ ಕ್ರೀಡಾಳುಗಳನ್ನು ನೀಡುತ್ತಿರುವುದು ಶ್ಲಾಘನೀಯ; ಮುಂದೆ ಈ ಪ್ರಯತ್ನ ಒಲಿಂಪಿಕ್ಸ್‌ನಲ್ಲಿ ಫಲಪ್ರದವಾಗುವ ದಿನ ಬರುವಂತಾಗಲಿ’ ಎಂದು ಹಾರೈಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಅಧ್ಯಕ್ಷತೆ ವಹಿಸಿ, ಡಾ. ಮೋಹನ ಆಳ್ವರ ದೂರದರ್ಶಿತ್ವ, ಪ್ರಯತ್ನಗಳ ಫಲವಾಗಿ ರಿಯೋ ಒಲಿಂಪಿಕ್ಸ್‌ನಲ್ಲಿ ಆಳ್ವಾಸ್‌ನ ಕ್ರೀಡಾಳುಗಳು ಭಾಗವಹಿಸುವಂತಾಗಿದೆ, ಈ ಬಾರಿ ಮಂಗಳೂರು ವಿ.ವಿ. ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ, ಅಷ್ಟೇ ಏಕೆ ಕರ್ನಾಟಕದಲ್ಲೇ ಮೊದಲ ಬಾರಿಗೆ ಅಖಿಲಭಾರತ ಅಂತರ್ ವಿವಿ ಕ್ರೀಡಾಕೂಟದಲ್ಲಿ ಚ್ಯಾಂಪಿಯನ್‌ಶಿಪ್ ಗಳಿಸುವಂತಾಗಿದೆ. ಬಾಲ್‌ಬ್ಯಾಡ್ಮಿಂಟನ್, ವಾಲಿಬಾಲ್, ಖೊಖೊದಂಥ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಮೂರು ವರ್ಷಗಳಲ್ಲಿ ಆಳ್ವಾಸ್ ಚ್ಯಾಂಪಿಯನ್‌ಶಿಪ್ ಪಡೆದಿದೆ. ನಮ್ಮ ಮುಂದಿನ ನಡೆ ಒಲಿಂಪಿಕ್ಸ್‌ನತ್ತ ಎಂದರು.
ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎ. ಯತಿಕುಮಾರ ಸ್ವಾಮಿ ಗೌಡ ಸ್ವಾಗತಿಸಿದರು. ಆಳ್ವಾಸ್‌ನ ಎಲ್ಲ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡಿಸ್ ವಂದಿಸಿರು. ಗ್ರೀಷ್ಮಾ ಶೆಟ್ಟಿ ನಿರೂಪಿಸಿದರು.