ಕನ್ನಡದ ಹಿರಿಮೆ ಅರ್ಥ ಮಾಡಿಕೊಂಡವರು ಅನ್ಯ ಭಾಷಾ ವ್ಯಾಮೋಹಕ್ಕೆ ಬಲಿಯಾಗಲಾರರು: ಪೂರ್ಣಿಮಾ

Update: 2017-02-12 07:40 GMT

ಕಾಸರಗೋಡು, ಫೆ.12: ಕನ್ನಡ ಬರೀ ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕತಿ. ಕನ್ನಡ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿಯ ಹಿರಿಮೆಯನ್ನು ಅರ್ಥಮಾಡಿಕೊಂಡವರು ಅನ್ಯ ಭಾಷಾ ವ್ಯಾಮೋಹಕ್ಕೆ ಬಲಿಯಾಗಲಾರರು ಎಂದು ಸಾಹಿತಿ, ಕಲಾವಿದೆ ಪೂರ್ಣಿಮಾ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಸರಕಾರದಕನ್ನಡಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ, ಕಾಸರಗೋಡಿನ ಅಪೂರ್ವ ಕಲಾವಿದರು ಸಂಸ್ಥೆಯ ಸಹಕಾರದೊಂದಿಗೆ ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ನಡೆದ ‘ಕನ್ನಡ ಚಿಂತನೆ’ ಕಾರ್ಯಕ್ರಮದಲ್ಲಿ ಅವರು ‘ಕನ್ನಡ ಭಾಷೆಯ ಮಹತ್ವ’ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿದರು.

‘ಒಂದು ಕಾಲದಲ್ಲಿ ಕನ್ನಡ ನಾಡು, ಭಾಷೆ, ಸಂಸ್ಕೃತಿಗಳ ವ್ಯಾಪ್ತಿ ಇಂದಿನ ಕರ್ನಾಟಕ ರಾಜ್ಯದ ಗಡಿ ರೇಖೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದು ಈಗಿನ ಮಹಾರಾಷ್ಟ್ರದ ವರೆಗೂ ವಿಸ್ತರಿಸಿತ್ತು. ಕಾಸರಗೋಡು, ಸೊಲ್ಲಾಪುರ, ಹೊಸೂರು ಮುಂತಾದುವು ಇಂದಿಗೂ ಕನ್ನಡದ ಮಣ್ಣು. ಕನ್ನಡ ಭಾಷೆಯ ಪರಂಪರೆ ಮತ್ತು ಅದರ ಸಾಹಿತ್ಯ ಸಂಪತ್ತು ಭಾರತೀಯ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದು, ಇದರಿಂದಲೇ ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನದ ಮನ್ನಣೆಯೂ ಲಭಿಸಿದೆ ಎಂದು ಅವರು ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಕಲಾವಿದ ವಿದ್ವಾನ್ ಬಾಬು ರೈ, ಯಕ್ಷಗಾನ ಕಲೆಯಿಂದ ಕನ್ನಡ ಭಾಷೆ ಸಮೃದ್ಧವಾಗಿದೆ. ಭಾಷೆಯ ಕಟ್ಟುನಿಟ್ಟು ಯಕ್ಷಗಾನ ಕಲೆಗೆ ಶೋಭೆಯನ್ನೂ ತಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯ ವ್ಯವಸ್ಥಾಪಕ ಕೆ.ಜಿ.ಶ್ಯಾನುಭೋಗ್ ವಹಿಸಿದ್ದರು.

ಹಿರಿಯ ಕನ್ನಡಪರ ಹೋರಾಟಗಾರ, ವಿಶ್ರಾಂತ ಮುಖೋಪಾಧ್ಯಾಯ ಪುರುಷೋತ್ತಮ ಬಿ., ಹಿರಿಯ ಯಕ್ಷಗಾನ ಕಲಾವಿದ ಆನಂದ ಕೂಡ್ಲು ಮತ್ತು ಹಾರ್ಮೋನಿಯಂ ಕಲಾವಿದ ಭಾಸ್ಕರ ಕೂಡ್ಲುರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆರ್.ಜಿ.ಹಳ್ಳಿ ನಾಗರಾಜ್, ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಹರಿ ಎನ್., ಯಕ್ಷಗಾನ ಭಾಗವತ ತಲ್ಪನಾಜೆ ವೆಂಕಟ್ರಮಣ ಭಟ್, ಕನ್ನಡ ಸಮನ್ವಯ ಸಮಿತಿ ಯುವ ಬಳಗದ ಕಾರ್ಯದರ್ಶಿ ರಾಜೇಶ್ ಎಸ್.ಪಿ. ಉಪಸ್ಥಿತರಿದ್ದರು.

ಅಪೂರ್ವ ಕಲಾವಿದರು ಸಂಘಟನೆಯ ಅಧ್ಯಕ್ಷ ಉಮೇಶ ಎಂ. ಸಾಲ್ಯಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
  ಅಧ್ಯಾಪಕ ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಚಿಂತನೆ ಕಾರ್ಯಕ್ರಮ ಸಂಯೋಜಕ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ವಂದಿಸಿದರು.

ಚಿತ್ರದುರ್ಗದ ಮಲ್ಲಯ್ಯ ಶ್ರೀಮಠ, ಶಿವು ಮೈಸೂರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ಮುರಾಸುರ ವಧೆ’ ಎಂಬ ಯಕ್ಷಗಾನ ಪ್ರದರ್ಶನವು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News