ಹಳೆಯಂಗಡಿ ರೈಲ್ವೇ ಗೇಟ್ ಬಳಿ ಟ್ರಾಫಿಕ್ ಜ್ಯಾಂ ಮುಗಿಯದ ಗೋಳು
ಮೂಲ್ಕಿ,ಫೆ.12:ಕಳೆದ ದಿನಗಳ ಹಿಂದೆ ಸ್ಥಳೀಯ ಸಮಾಜಿಕ ಸಂಘಟನೆಗಳು ಸೇರಿ ಹಳೆಯಂಗಡಿಯ ರೈಲ್ವೇ ಗೇಟ್ ಬಳಿ ಪ್ಲಾಸ್ಟಿಕ್ ಬ್ಯಾರಿಕೇಡರ್ ಅಳವಡಿಸಿದರೂ ವಾಹನಗಳ ಎರ್ರಾಬಿರ್ರಿಯಾಗಿ ನುಗ್ಗುತ್ತಿರುವುದರಿಂದ ಮತ್ತೆ ಟ್ರಾಫಿಕ್ ಜ್ಯಾಂ ಮಾಮೂಲಿಯಾಗಿದೆ.ಪ್ಲಾಸ್ಟಿಕ್ ಬ್ಯಾರಿಕೇಡರ್‌ನ್ನು ಲೆಕ್ಕಿಸದೆ ಬಸ್ಸುಗಳು ರಾಂಗ್‌ಸೈಡಿನಲ್ಲಿ ಮುನ್ನುಗ್ಗುತ್ತಿದೆ. ರೈಲ್ವೇಗೇಟ್ ತೆಗೆದ ಕೂಡಲೇ ಅಪಾಯಕಾರಿ ರೀತಿಯಲ್ಲಿ ಬ್ಯಾರಿಕೇಡರುಗಳನ್ನು ಲೆಕ್ಕಿಸದೆ ಮುನ್ನುಗ್ಗುತ್ತಿದ್ದು ಸ್ಥಳೀಯರನ್ನು ಭಯಭೀತರನ್ನಾಗಿಸುತ್ತಿದೆ.
ಮೇಲ್ಸೇತುವೆಗೆ ಒತ್ತಾಯ
ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರ ಬೇಡಿಕೆಯಾದ ಹಳೆಯಂಗಡಿ ಇಂದ್ರನಗರ ರೈಲ್ವೇ ಗೇಟ್ ಬಳಿ ಮೇಲ್ಸೇತುವೆ ಗಗನಕುಸುಮವಾಗಿದ್ದು ಸಂಸದರು ಕ್ರಿಯಾಶೀಲರಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸಂಸದರಿಗೆ ಸ್ಥಳೀಯರು ಅನೇಕ ಬಾರಿ ಈ ಬಗ್ಗೆ ಮನವಿ ಸಲ್ಲಿಸಿದರೂ ಇನ್ನೂ ಕಾರ್ಯರೂಪಕ್ಕೆ ಬಾರದಿರುವುದು ದುರದೃಷ್ಟಕರ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೆಯಂಗಡಿ ಇಂದ್ರನಗರ ರೈಲ್ವೇ ಕ್ರಾಸಿಂಗ್‌ನಲ್ಲಿ ನಿಮಿಷಕ್ಕೊಂದರಂತೆ ವಾಹನಗಳು ಚಲಿಸುತ್ತಿದ್ದು ರೈಲ್ವೇ ಗೇಟ್ ಹಾಕಿದರೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಹಿತ ದ್ವಿಚಕ್ರ ವಾಹನಿಗರು ಜೀವ ಕೈಯಲ್ಲಿ ಹಿಡಿದು ಕೂರಬೇಕಾದ ಪರೀಸ್ಥಿತಿ ಇದೆ.ಕೂಡಲೆ ಇಲ್ಲಿ ಶಾಶ್ವತ ಮೇಲ್ಸೇತುವೆ ಕಾಮಗಾರಿ ನಡೆಸಬೇಕು ಎಂದು ಸ್ಥಳೀರು ಒತ್ತಾಯಿಸಿದ್ದಾರೆ.