ಪೈಲಾರಿನಲ್ಲಿ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳ ಸಮಾವೇಶ
ಸುಳ್ಯ,ಫೆ.12: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ವತಿಯಿಂದ ತಾಲೂಕು ಮಟ್ಟದ ಮಹಿಳಾ ಸಮಾವೇಶವು ಪೈಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಿತು.
ರಂಗಾಯಣ ಕಲಾವಿದೆ ಶ್ರೀಮತಿ ಗೀತಾ ಮೋಂಟಡ್ಕರವರು ಕಾರ್ಯಕ್ರಮ ಉದ್ಘಾಟಿಸಿದರು. ನಮ್ಮ ಬದುಕಿನ ಶಕ್ತಿ ನಾವೇ.. ಮತ್ಸರವೇ ನಮ್ಮ ಮೊದಲ ಶತ್ರು. ಇದ್ದಲ್ಲಿ ಇದ್ದ ಹಾಗೆ ಬದುಕುವುದೇ ವಾತ್ಸವದ ಬದುಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಅಂಗಾರ ಮಾತನಾಡಿ ಭಾವನೆಗಳ ನೆಲೆಯಲ್ಲಿ ಬದುಕು ರೂಪಿತವಾಗುತ್ತದೆ. ಬದುಕಿನಲ್ಲಿ ಸ್ತ್ರೀ ಶಕ್ತಿಗೆ ಹೆಚ್ಚಿನ ನೆಲೆ ಹಾಗೂ ಬೆಲೆ ಇದೆ. ಆತ್ಮ ವಂಚನೆಯ ಬದುಕು ದೂರ ಮಾಡಿ ಭಾವನಾತ್ಮಕವಾಗಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ , ಜ್ಞಾನ ವಿಕಾಸ ಕಾರ್ಯಕ್ರಮದ ಕೇಂದ್ರ ಕಚೇರಿಯ ನಿರ್ದೇಶಕಿ ಶ್ರೀಮತಿ ಮಮತಾ ಹರೀಶ್ ರಾವ್, ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷೆ ಶ್ರೀಮತಿ ವಿಮಲಾ ರಂಗಯ್ಯ, ಪೈಲಾರು ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಕೃಷ್ಣ ಪ್ರಸಾದ್ ಮಾಡಬಾಗಿಲು ಮಾತನಾಡಿದರು.
ಸಮಾರಂಭದಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಶಾರದಾ ಕಮಿಲ ಅಭಿಪ್ರಾಯ ವ್ಯಕ್ತಪಡಿಸಿದರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಶ್ರೀಮತಿ ಮಮತಾ ಸ್ವಾಗತಿಸಿ ಪ್ರಸ್ತಾವನೆಗೈದರು. ಜಯಂತ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ಅಂಗವಾಗಿ ರಂಗೋಲಿ ಸ್ಪರ್ಧೆ, ಪುಷ್ಪ ಗುಚ್ಚ ತಯಾರಿ ಸ್ಪರ್ಧೆ, ಮಹಿಳಾ ವಿಚಾರ ಗೋಷ್ಠಿ, ಆಟೋಟ ಸ್ಪರ್ಧೆಗಳು, ಜಾನಪದ ನೃತ್ಯ ಸ್ಪರ್ಧೆ ನಡೆಯಿತು.