×
Ad

ಮನೆ ಮನೆಗಳಲ್ಲಿ ನೀರಿಂಗಿಸುವ ಕೆಲಸವಾಗಬೇಕು: ರಾಜೇಶ್ ಸಾಲ್ಯಾನ್

Update: 2017-02-12 17:53 IST

ಮಂಗಳೂರು,ಫೆ.12: ದ.ಕ. ಜಿಲ್ಲೆಯಲ್ಲಿ ದಾಖಲೆಯ ಬಾವಿ ನಿರ್ಮಾಣವಾಗಿದ್ದರೂ ಸರಕಾರ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ವಿಪರ್ಯಾಸ. ಆದರೆ ಈ ಯೋಜನೆ ಕಾರ್ಯಗತಗೊಳ್ಳುವ ಮುನ್ನವೇ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಮಳೆ ನೀರನ್ನು ಸಂಗ್ರಹಿಸುವುದರೊಂದಿಗೆ ಮನೆಮನೆಗಳಲ್ಲಿ ನೀರಿಂಗಿಸುವ ಕೆಲಸ ನಡೆಯಬೇಕು. ಅದರೊಂದಿಗೆ ಅರಣ್ಯ ನಾಶವನ್ನು ತಪ್ಪಿಸಿ ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೇಶ್ ಸಾಲ್ಯಾನ್ ಹೇಳಿದರು.

ದ.ಕ. ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಸ್ವಚ್ಛತಾ ಮಿಷನ್, ವಯಸ್ಕರ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ರವಿವಾರ ನಡೆದ ಜಲಸಾಕ್ಷರತೆ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಜಿಪಂ ಉಪ ಕಾರ್ಯದರ್ಶಿ ಎನ್. ಆರ್. ಉಮೇಶ್ ಮಾತನಾಡಿ ದೇಶದಲ್ಲಿ ಶೇ.33ರಷ್ಟು ಯುವ ಜನಾಂಗವಿದೆ. ಯುವಜನರನ್ನು ಬಲಪಡಿಸಿದರೆ ಅಭಿವೃದ್ಧಿ ಸಾಧ್ಯವಿದೆ. ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಯುವಜನಾಂಗ ವಿವಿಧ ಇಲಾಖೆಗಳ ಜೊತೆ ಕೈಜೋಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ನವೀನ್ ಮಾತನಾಡಿ, ಭ್ರೂಣ ಪತ್ತೆಗೆ ಸಂಬಂಧಿಸಿದ ಅಲ್ಟ್ರಾ ಸೊನಗ್ರಫಿ ಕೇಂದ್ರವನ್ನು ತೆರಯಬೇಕಾದರೆ ವೈದ್ಯರು ‘ಬಿ’ ಸರ್ಟಿಫಿಕೇಟ್ ಪಡೆದಿರಬೇಕು. ಇದಕ್ಕೆ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆದಿರಬೇಕು. ಈ ಸ್ಕಾನಿಂಗ್ ವ್ಯವಸ್ಥೆ ಭ್ರೂಣ ಸ್ಥಿತಿಯಲ್ಲಿ ಮಕ್ಕಳಲ್ಲಿರುವ ರೋಗಗಳ ಪತ್ತೆಗೆ ಅನಿವಾರ್ಯವಾಗಿರುವುದರಿಂದ ಇದರ ಮೇಲೆ ನಿಷೇಧ ಹಾಕಲು ಸಾಧ್ಯವಿಲ್ಲ. ಆದರೆ ಲಿಂಗ ಪತ್ತೆಯ ಅಂಶ ಸಾಬೀತಾದರೆ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಅವಕಾಶವಿದೆ. ಮೊದಲ ಬಾರಿಯ ತಪ್ಪಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಎರಡನೇ ಬಾರಿಯ ತಪ್ಪಿಗೆ 5 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ ಹಾಗೂ ಮೂರನೇ ಬಾರಿಯ ತಪ್ಪಿಗೆ ಪರವಾನಗಿಯನ್ನೇ ರದ್ದುಪಡಿಸಿ ಶಿಕ್ಷೆಗೆ ಗುರಿಪಡಿಲಾಗುವುದು. ಸ್ಕಾನಿಂಗ್ ಮಾಡಿಸಿಕೊಳ್ಳುವವರು ‘ಎಫ್’ ಫಾರಂ ತುಂಬಿಸಬೇಕು. ಯಾರು ಸ್ಕಾನಿಂಗ್ ಮಾಡುತ್ತಾರೆ? ಸ್ಕಾನಿಂಗ್ ಮಾಡಿಸಿಕೊಳ್ಳುವವರು ಯಾರು? ಶಿಾರಸು ಮಾಡಿದ ವೈದ್ಯರು ಯಾರು? ಯಾರು ಕಳುಹಿಸಿದ್ದಾರೆ? ಇತ್ಯಾದಿ ವಿವರಗಳನ್ನು ‘ಎಫ್’ ಫಾರಂನಲ್ಲಿ ತುಂಬಿಸಬೇಕು ಎಂದರು.

ಜಿಲ್ಲಾ ಯೋಜನಾ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಜಿಲ್ಲಾ ಆರೋಗ್ಯ ಇಲಾಖೆಯ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರತ್ನಾಕರ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ, ಶೈಲೇಶ್ ಅಂಬೆಕಲ್ಲು, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News