ತಲಪಾಡಿ: ಟೋಲ್ ವಿರುದ್ಧ ಎಲ್‌ಡಿವೈಎಫ್ ಪ್ರತಿಭಟನೆ
ಮಂಗಳೂರು, ಫೆ.12: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಟೋಲ್ ಸಂಗ್ರಹಿಸುವುದನ್ನು ಖಂಡಿಸಿ ಡಿವೈಎಫ್‌ಐ ಉಳ್ಳಾಲ ಮತ್ತು ಮಂಜೇಶ್ವರ ವಲಯ ಹಾಗು ಎಐವೈಎಫ್ ಮಂಜೇಶ್ವರ ವಲಯವು ಜಂಟಿಯಾಗಿ ‘ಎಲ್‌ಡಿವೈಎಫ್’ ವೇದಿಕೆಯಡಿ ರವಿವಾರ ತಲಪಾಡಿಯಲ್ಲಿ ಪ್ರತಿಭಟನೆ ನಡೆಸಿತು.
ರಾ.ಹೆ. ಕಾಮಗಾರಿ ಪೂರ್ಣಗೊಂಡ ಬಳಿಕವೇ ಟೋಲ್ ಸಂಗ್ರಹಿಸಬೇಕು. ನೋಂದಣಿ ಸಂಖ್ಯೆ ಕೆಎಲ್ 14 ಮತ್ತು ಕೆಎ 19ರ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೇರಳದ ಎಲ್ಲ ಟೋಲ್‌ಗೇಟ್‌ಗಳನ್ನು ಕೇವಲ ಹೋರಾಟದ ಮೂಲಕ ಡಿವೈಎಫ್‌ಐ ಎತ್ತಂಗಡಿ ಮಾಡಿಸಿದೆ. ಇದೀಗ ಕರ್ನಾಟಕ ಜನತೆ ಎದ್ದಿದ್ದಾರೆ. 60 ಕಿ. ಮೀ. ವ್ಯಾಪ್ತಿಯಲ್ಲಿ 1 ಟೋಲ್‌ಗೆಟ್ ಇರಬೇಕೆಂಬ ನಿಯಮವನ್ನು ಉಲ್ಲಂಘಿಸಿ ದ.ಕ.ಜಿಲ್ಲೆಯಲ್ಲಿ 35 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಟೋಲ್‌ಗೇಟ್‌ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಸಂಸದರು ಏನು ಮಾಡುತ್ತಿದ್ದಾರೆ ಎಂದು ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಬಿ.ಕೆ.ಇಮ್ತಿಯಾಝ್ ಪ್ರಶ್ನಿಸಿದರು.
ಕೇರಳದಲ್ಲಿ ಒಂದು ಕಿ.ಮೀ. ರಸ್ತೆ ಅಭಿವೃದ್ಧಿಯೂ ಆಗಿಲ್ಲ, ಟೋಲ್ ಆರಂಭಗೊಳ್ಳುತ್ತಿದ್ದಂತೆಯೇ ಕರ್ನಾಟಕ ಮತ್ತು ಕೇರಳ ರಾಜ್ಯ ಸರಕಾರಿ ಬಸ್ಸುಗಳಲ್ಲಿ ಮೂರು ರೂಪಾಯಿ ಪ್ರಯಾಣ ದರ ಏರಿಸಿ ಜನರಿಂದ ವಸೂಲಿ ಮಾಡಲಾಗುತ್ತಿದೆ. ಟೋಲ್ ಹೆಸರಲ್ಲಿ ಜನರನ್ನು ಸುಲಿಯುವ ಕಂಪನಿ ವಿರುದ್ಧ ಡಿವೈಎಫ್‌ಐ ಸಮರ ಸಾರಿದೆ ಎಂದು ಮಂಜೇಶ್ವರ ಡಿವೈಎಫ್‌ಐ ಅಧ್ಯಕ್ಷ ಹರೀಶ್ ಕಿಲ್ಯಾರ್ ಹೇಳಿದರು.
ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನಲ್ಲಿ ಶೇ.30ರಷ್ಟೂ ಮೇಲ್ಸೇತುವೆ ಕಾಮಗಾರಿ ಮುಗಿದಿಲ್ಲ, ದಾರಿದೀಪ, ಸರ್ವೀಸ್ ರಸ್ತೆ ನಿರ್ಮಿಸಲಿಲ್ಲ. ಆದರೂ ಕಂಪೆನಿಯು ಟೋಲ್ ವಸೂಲಿಗೆ ಮುಂದಾಗಿರುವುದು ಖಂಡನೀಯ. ಕಾಂಗ್ರೆಸ್ ಪ್ರತಿಭಟನೆಯ ನಾಟಕವಾಡಿ ಐದು ಕಿ.ಮೀ.ವರೆಗೆ ವಿನಾಯಿತಿಗೆ ಮಣಿಯುವ ಮೂಲಕ ಜನರನ್ನು ವಂಚಿಸಿದೆ ಎಂದು ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ಕುತ್ತಾರ್ ಆರೋಪಿಸಿದರು.
‘ಎಲ್‌ಡಿವೈಎಫ್’ ಸಂಘಟನೆಯ ಮುಖಂಡರಾದ ಮಣಿಕಂಠನ್, ಕೆ.ಆರ್. ಜಯಾನಂದ, ಕೃಷ್ಣಪ್ಪ ಸಾಲ್ಯಾನ್, ದಿವಾಕರ ಮಾಡ, ಸುನೀಲ್ ತೇವುಲ, ಪ್ರಶಾಂತ್ ಕನಿಲ, ನಿತಿನ್ ಕುತ್ತಾರ್, ಇಬ್ರಾಹೀಂ ಅಂಬ್ಲಮೊಗರು, ಮಹಾಬಲ ದೆಪ್ಪೇಲಿಮ್ಮಾರ್, ಸಾದಿಕ್ ಚಿರಗೋಳಿ, ಪಿ.ವಿ.ರಾಜನ್, ಮುಸ್ತಫಾ ಚಿರಗೋಳಿ, ರಾಮಕೃಷ್ಣ ಕಡಂಬಾರ್, ಅಶ್ರಫ್ ಕುಂಜತ್ತೂರು, ಬಶೀರ್ ಪೆರ್ಲ, ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು.