×
Ad

ಟೈಲರ್ಸ್‌ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ : ಟೈಲರ್ಸ್‌ ಸಮಾವೇಶದಲ್ಲಿ ಕೋಟ ಶ್ರೀನಿವಾಸ ಪೂಜಾರಿ

Update: 2017-02-12 18:40 IST

ಉಡುಪಿ, ಫೆ.12: ಈ ಬಾರಿಯ ರಾಜ್ಯ ಅಧಿವೇಶನದಲ್ಲಿ ಟೈಲರ್ಸ್‌ಗಳ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆದು, ಪರಿಹಾರ ಕಂಡುಕೊಳ್ಳುವ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಶನ್ ಉಡುಪಿ ಕ್ಷೇತ್ರ ಸಮಿತಿ ವತಿಯಿಂದ ರವಿವಾರ ಬನ್ನಂಜೆ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಟೈಲರ್ಸ್‌ ವೃತ್ತಿ ಬಾಂಧವರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮಾಜದಲ್ಲಿ ಹಿಂದಿನಿದಂಲೂ ಟೈಲರ್ಸ್‌ಗಳ ಪಾತ್ರ ಬಹಳ ಮಹತ್ವದ್ದಾ ಗಿದೆ. ಆದರೆ ಅವರ ಬದುಕು ಇಂದಿಗೂ ಸುಧಾರಿಸಿಲ್ಲ. ರಾಜ್ಯದಲ್ಲಿ ಸುಮಾರು 30ಸಾವಿರಕ್ಕೂ ಅಧಿಕ ವೃತ್ತಿ ಟೈಲರ್ಸ್‌ಗಳಿದ್ದಾರೆ. ಅದೇ ರೀತಿ 4ಲಕ್ಷಕ್ಕೂ ಅಧಿಕ ಗಾರ್ಮೆಂಟ್ ಗುತ್ತಿಗೆ ಆಧಾರಿತ ಟೈಲರ್ಸ್‌ಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದರು.

ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 1500 ಕೋಟಿ ರೂ. ಹಣ ಉಳಿದುಕೊಂಡಿದೆ. ಹಾಗಾಗಿ ಟೈಲರ್ಸ್‌ಗಳನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಲು ಯಾವುದೇ ಹಣದ ಕೊರತೆ ಎದುರಾಗಲ್ಲ. ಈವರೆಗೆ ಅಸಂಘಟಿತ ಕಾರ್ಮಿಕ ವಲಯಕ್ಕೆ ಟೈಲರ್ಸ್‌ಗಳನ್ನು ಸೇರಿಸದಿರುವುದು ಆಶ್ಚರ್ಯ ಉಂಟು ಮಾಡುತ್ತದೆ. ಇದರಿಂದ ಟೈಲರ್ಸ್‌ಗಳು ಸಾಕಷ್ಟು ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ ಎಂದರು.

ಸಂಘದ ಕ್ಷೇತ್ರ ಅಧ್ಯಕ್ಷ ಗುರುರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಅಧಿಕಾರಿ ಜೀವನ್ ಕುಮಾರ್, ಕರ್ನಾಟಕ ಕಾರ್ಮಿಕರ ವೇದಿಕೆಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆವೀನ್ ನೆಲ್ಸನ್, ಸುರೇಶ್ ಪುರೋಹಿತ್, ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯ ಸದಸ್ಯ ಪ್ರವೀಣ್ ಸಾಲ್ಯಾನ್, ಕೆಎಸ್‌ಟಿಎ ಮಾಜಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ಆನಂದ್, ರಾಜ್ಯ ಸಲಹಾ ಸಮಿತಿ ಸದಸ್ಯ ವಿಠಲ ಶೆಟ್ಟಿ, ಜಿಲ್ಲಾಧ್ಯಕ್ಷ ವಿಲಿಯಂ ಮಚಾದೋ, ಪ್ರಧಾನ ಕಾರ್ಯದರ್ಶಿ ಯುಗಾ ನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಸ್ವಾಗತಿಸಿದರು. ರಾಜ್ಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೋಶಾಧಿಕಾರಿ ಕೆ.ರಾಮಚಂದ್ರ ವಂದಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಉಡುಪಿ ಸಿಟಿಬಸ್ ನಿಲ್ದಾಣದಿಂದ ಬನ್ನಂಜೆಯವರೆಗೆ ಟೈಲರ್ಸ್‌ ಅವರಿಂದ ಮೆರವಣಿಗೆ ನಡೆಯಿತು.

ಟೈಲರ್ಸ್‌ಗಳ ಬೇಡಿಕೆಗಳು

ಹೊಲಿಗೆ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೊಳಿಸಬೇಕು. ಪಿಂಚಣಿ ಹಾಗೂ ಎಸ್‌ಪಿಎಸ್ ಲೈಟ್ ಯೋಜನೆಯನ್ನು ಎಲ್ಲ ವೃತ್ತಿ ಬಾಂಧ ವರಿಗೂ ಜಾರಿಗೊಳಿಸಬೇಕು. ಸರಕಾರ ಅಂಗೀಕರಿಸಿದ ಸ್ಮಾಟ್‌ಕಾರ್ಡ್ ಗುರು ತಿನ ಚೀಟಿಯನ್ನು ನೀಡಬೇಕು. ಮಹಿಳಾ ಟೈಲರ್ಸ್‌ ಹಾಗೂ ಎಲ್ಲ ಟೈಲರ್ಸ್‌ ಗಳ ಹೆಣ್ಣು ಮಕ್ಕಳಿಗೆ ವಿವಾಹಧನ ಮತ್ತು ಹೆರಿಗೆ ಭತ್ಯೆ ನೀಡಬೇಕು. ಹೊಲಿಗೆ ಟೈಲರ್ಸ್‌ಗಳಿಗೆ ವಿಮಾ ಯೋಜನೆ ಮತ್ತು ಆರೋಗ್ಯ ಕಾರ್ಡ್, ನಿವೃತ್ತಿ ಮಾಸಾಶನ ವೇತನ ನೀಡಬೇಕು. ಮಕ್ಕಳಿಗೆ ವಿದ್ಯಾರ್ಥಿ ವೇತನ ಒದಗಿಸ ಬೇಕು. ಟೈಲರ್ಸ್‌ ಸಮುದಾಯ ಭವನ ನಿರ್ಮಿಸಲು ಸ್ಥಳ ಹಾಗೂ ಅನುದಾನ ಮಂಜೂರು ಮಾಡಬೇಕು ಎಂಬ ಬೇಡಿಕೆಯ ಮನವಿಯನ್ನು ಶಾಸಕ ಕೋಟ ಶ್ರೀನಿವಾಸ ಪೂಜಾರಿಗೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News