×
Ad

ಉಳ್ಳಾಲ ನಗರಸಭೆಯ ಉಪಚುನಾವಣೆ ಶಾಂತಿಯುತ ಮತದಾನ

Update: 2017-02-12 18:45 IST

ಮಂಗಳೂರು, ಫೆ.12: ಉಳ್ಳಾಲ ನಗರಸಭೆಯ 24 ಮತ್ತು 26ನೆ ವಾರ್ಡ್‌ಗೆ ರವಿವಾರ ನಡೆದ ಉಪಚುನಾವಣೆಯಲ್ಲಿ ಶಾಂತಿಯುತ ಮತದಾನವಾಗಿದೆ. 24ನೆ ವಾರ್ಡ್‌ಗೆ ಬಬ್ಬುಕಟ್ಟೆ ಶಾಲೆ ಮತ್ತು 26ನೆ ವಾರ್ಡ್‌ಗೆ ಕಲ್ಲಾಪು ಪಟ್ಲ ಸರಕಾರಿ ಶಾಲೆಯಲ್ಲಿ ಮತದಾನ ನಡೆದಿತ್ತು.

2013ರಲ್ಲಿ ನಡೆದ ಚುನಾವಣೆಯಲ್ಲಿ 24ನೆ ಚೆಂಬುಗುಡ್ಡೆ ವಾರ್ಡ್‌ನಿಂದ ಗೆದ್ದ ಕಾಂಗ್ರೆಸ್‌ನ ಬಾಝಿಲ್ ಡಿಸೋಜ ಮತ್ತು 26ನೆ ವಾರ್ಡ್‌ನಿಂದ ಗೆದ್ದ ಕಾಂಗ್ರೆಸ್‌ನ ಉಸ್ಮಾನ್ ಕಲ್ಲಾಪು ತಮ್ಮ ಕ್ರಿಮಿನಲ್ ಮೊಕದ್ದಮೆ ಬಗ್ಗೆ ಅಫಿದವಿತ್‌ನಲ್ಲಿ ಉಲ್ಲೇಖಿಸಿಲ್ಲ ಎಂದು ಪ್ರತಿಸ್ಪರ್ಧಿಗಳಾದ ಅನಿಲ್‌ದಾಸ್ ಮತ್ತು ದಿನಕರ ಉಳ್ಳಾಲ ನ್ಯಾಯಾಲಯದ ಮೆಟ್ಟಲೇರಿದ್ದರು. ಪ್ರಕರಣ ಹೈಕೋರ್ಟ್-ಸುಪ್ರೀಂ ಕೋರ್ಟ್ ಮೆಟ್ಟಲೇರಿ ಅಂತಿಮವಾಗಿ ಮರು ಚುನಾವಣೆಗೆ ಆದೇಶ ನೀಡಿತ್ತು. ಅದರಂತೆ ರವಿವಾರ ಈ ಎರಡು ಸ್ಥಾನಗಳಿಗೆ ಮತದಾನ ನಡೆದಿದ್ದು, ಫೆ.15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

►24ನೆ ವಾರ್ಡ್‌ನಲ್ಲಿ 728 ಪುರುಷ ಮತ್ತು 792 ಮಹಿಳೆಯರ ಸಹಿತ 1,520 ಮತದಾರರ ಪೈಕಿ 884 ಮಂದಿ ಮತದಾನ ಮಾಡಿದ್ದಾರೆ. ಇದರಲ್ಲಿ 399 ಪುರುಷರು ಮತ್ತು 485 ಮಹಿಳೆಯರು ಮತದಾನಗೈದಿದ್ದು, ಶೇ.58.15 ಮತದಾನವಾಗಿದೆ. ಇಲ್ಲಿ ಕಾಂಗ್ರೆಸ್‌ನಿಂದ ಬಾಝಿಲ್ ಡಿಸೋಜ, ಬಿಜೆಪಿಯಿಂದ ಸತೀಶ್ ಚೆಂಬುಗುಡ್ಡೆ, ಸಿಪಿಎಂನಿಂದ ಹರೀಶ್ ಶೆಟ್ಟಿ, ಪಕ್ಷೇತರನಾಗಿ ಅಬ್ದುಲ್ ಕಲಂದರ್ ಕಣದಲ್ಲಿದ್ದರು.

►26ನೆ ವಾರ್ಡ್‌ನಲ್ಲಿ 690 ಪುರುಷ ಮತ್ತು 688 ಮಹಿಳೆಯರ ಸಹಿತ 1,378 ಮತದಾರರ ಪೈಕಿ 1005 ಮಂದಿ ಮತದಾನ ಮಾಡಿದ್ದಾರೆ. ಇಲ್ಲಿ 457 ಪುರುಷರು ಮತ್ತು 548 ಮಹಿಳೆಯರು ಮತದಾನಗೈದಿದ್ದು, ಶೇ.72.93 ಮತದಾನವಾಗಿದೆ.

ಇಲ್ಲಿ ಕಾಂಗ್ರೆಸ್‌ನಿಂದ ಉಸ್ಮಾನ್ ಕಲ್ಲಾಪು, ಬಿಜೆಪಿಯಿಂದ ಚಂದ್ರಹಾಸ ಪಂಡಿತ್ ಹೌಸ್, ಜೆಡಿಎಸ್‌ನಿಂದ ಎಚ್.ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಪಕ್ಷೇತರನಾಗಿ ದಿನಕರ ಉಳ್ಳಾಲ ಕಣದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News