ಟೋಲ್ ವಿರೋಧಿಸಿ ನಾಳೆ ಉಡುಪಿ ಜಿಲ್ಲಾ ಬಂದ್

Update: 2017-02-12 13:36 GMT

ಪಡುಬಿದ್ರಿ,ಫೆ.12: ರಾಷ್ಟ್ರೀಯ ಹೆದ್ದಾರಿ ಸಂಪೂರ್ಣಗೊಳ್ಳದೆ ಹೆಜಮಾಡಿ, ಸಾಸ್ತಾನದಲ್ಲಿ ನಿರ್ಮಾಣಗೊಂಡಿರುವ ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹ ಮಾಡುವುದನ್ನು ವಿರೋಧಿಸಿ ಸೋಮವಾರ ಉಡುಪಿ ಜಿಲ್ಲಾ ಬಂದ್ ಯಶಸ್ವಿಗೊಳಿಸುವಂತೆ ವಿವಿಧ ಸಂಘಟನೆಗಳು ಕರೆ ನೀಡಿದೆ. ಪಡುಬಿದ್ರಿಯ ಪಿಂಗಾರ ಸಭಾಭವನದಲ್ಲಿ ಕರೆದ ಬಂದ್ ಪೂರ್ವಭಾವಿ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರು, ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಟೋಲ್ ಹೋರಾಟಗಾರರು ಭಾಗವಹಿಸಿ ಬೇಡಿಕೆಗಳು, ಬಂದ್‌ನ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.

ಕಳೆದ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಗುರುವಾರ ಮಧ್ಯರಾತ್ರಿ ಟೋಲ್‌ಸಂಗ್ರಹಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಶುಕ್ರವಾರ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಜನಪ್ರತಿನಿಧಗಳ ನಾಯಕತ್ವದಲ್ಲಿ ಹೆಜಮಾಡಿ ಟೋಲ್ ಪ್ಲಾಜಾದ ಪರಿಸರದಲ್ಲಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರರ ಮೂಲಕ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ್ದರು. ಬಳಿಕ ತಮ್ಮ ಬೇಡಿಕೆಗಳನ್ನು ಈಡೇರಿಸದೆ ಟೋಲ್ ಸಂಗ್ರಹವನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಪಟ್ಟು ಹಿಡಿದ ಕಾರಣ ಸುಮಾರು 27 ಪ್ರತಿಭಟನಾಕಾರರನ್ನು ಎಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದರು. ಈ ಸಂದರ್ಭ ಸೋಮವಾರ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿತ್ತು. ಬಂಧನದ ಬಳಿಕ ಟೋಲ್ ಸಂಗ್ರಹ ಮತ್ತೆ ಆರಂಭಿಸಲಾಯಿತು.

12ಗಂಟೆಯ ಬಂದ್: ಸೋಮವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದ್ದು, ಮೂಲಭೂತ ಸೌಕರ್ಯಗಳು, ಹಾಲು, ಪತ್ರಿಕೆ, ಅಂಬುಲೆನ್ಸ್, ವೈದ್ಯಕೀಯ ಸೇವೆ, ಬೆಳಗ್ಗಿನ ಮುಂಬಾಯಿ - ಬೆಂಗಳೂರು ಬಸ್ಸುಗಳಿಗೆ ಬಂದ್‌ನಿಂದ ವಿನಾಯತಿ ನೀಡಲಾಗಿದೆ. ಬಹುತೇಕ ಎಲ್ಲಾ ಶಾಲಾ ಕಾಲೇಜುಗಳ ಸಹಿತ ವಿದ್ಯಾರ್ಥಿ ಸಂಘಟನೆಗಳು ಈಗಾಗಲೇ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೋರಾಟ ಸಮಿತಿ ತಿಳಿಸಿದ್ದು ಎಲ್ಲಾ ಅಂಗಡಿ ಮುಗ್ಗಟ್ಟುಗಳು, ವಾಹನಗಳು, ಬಸ್ಸುಗಳು ಬಂದ್ ಆಗಲಿದೆ. ಆದರೆ ಸಾರ್ವಜನಿಕ ಜೀವನಕ್ಕೆ ಧಕ್ಕೆ ಬರುವಂತೆ ಬಲವಂತದ ಬಂದ್ ಮಾಡಲಾಗುವುದಿಲ್ಲ ಎಂದು ಹೋರಾಟಗಾರರು ತಿಳಿಸಿದ್ದಾರೆ. ಬೆಳಿಗ್ಗೆ ಗಂಟೆ ಸುಮಾರು 10ರ ವೇಳೆಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಡುಬಿದ್ರಿಯ ಮುಖ್ಯ ಪೇಟೆಯಿಂದ ಹೆಜಮಾಡಿ ಟೋಲ್‌ಗೇಟ್ ವರೆಗೆ ಪಾದಯಾತ್ರೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ವ್ಯಾಪಕ ಬೆಂಬಲ:

 ಕೆನರಾ ಬಸ್ಸು ಚಾಲಕ ಮಾಲಕರ ಸಂಘ, ಲಾರಿ ಮಾಲಕರ ಸಂಘ, ಸಿಟಿ ಬಸ್ಸು ಚಾಲಕ ಮಾಲಕ ಸಂಘ, ವರ್ತಕರ ಸಂಘ, ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ ಮಾಲಕ ಸಂಘ, ಆಲ್ ಕಾಲೇಜ್ ಸ್ಟೂಡೆಂಟ್ ಅಸೋಸಿಯೇಶನ್, ಎಬಿವಿಪಿ ಮತ್ತು ಎನ್‌ಎಸ್‌ಯುಐ, ಉಡುಪಿ ಜಿಲ್ಲಾ ಡಾಕ್ಟರ್ಸ್‌ ಫೋರಮ್ ಅಸೋಸಿಯೇಶನ್, ಕಾಪು ಪ್ರಖಂಡ ಬಜರಂಗ ದಳ, ತುಳುನಾಡ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ,ಡಿಎಸ್‌ಎಸ್ ಒಕ್ಕೂಟ,ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ,ಬಂಟರ ಯಾನೆ ನಾಡವರ ಮಾತೃ ಸಂಘ,ಬಿಲ್ಲವರ ಮಹಾಮಂಡಲ,ಮುಸ್ಲಿಮ್ ಒಕ್ಕೂಟ,ಕುಲಾಲ ಸಂಘ, ವಿಶ್ವಕರ್ಮ ಒಕ್ಕೂಟ, ಎಸ್‌ಡಿಪಿಐ ಉಡುಪಿ ಜಿಲ್ಲೆ, ಜಿಲ್ಲಾ ಜೈ ಕರ್ನಾಟಕ, ದಲಿತ ಸಮಾಜ ಸಂಘ, ಮುಂಡಾಲ ಸಮಾಜ, ದೇವಾಡಿಗ ಮಹಾಮಂಡಲ, ದ್ರಾವಿಡ ಬ್ರಾಹ್ಮಣ ಸಭಾ ಸೇರಿದಂತೆ ಬಂದ್ ಬೆಂಬಲ ಸೂಚಿಸಿವೆ ಎಂದು ಟೋಲ್ ವಿರೋಧಿ ಹೋರಾಟಗಾರ ಡಾ. ದೇವಿಪ್ರಸಾದ್ ಶೆಟ್ಟಿ ಸಭೆಯಲ್ಲಿ ತಿಳಿಸಿದ್ದಾರೆ.

ಡಿಸಿ ವಿರುದ್ಧ ಆಕ್ರೋಶ: ಉಡುಪಿ ಜಿಲ್ಲಾಧಿಕಾರಿ ಟೋಲ್ ಸಮಸ್ಯೆಯ ಬಗ್ಗೆ ಜನರೊಂದಿಗೆ ಚರ್ಚಿಸಲು ಸಿದ್ಧವಿಲ್ಲ. ಜಿಲ್ಲಾಧಿಕಾರಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಜನರ ಕುಂದು ಕೊರತೆಯ ಬಗ್ಗೆ ಕಾಳಜಿ ವಹಿಸದೆ ಜನರೊಂದಿಗೆ ಆಟವಾಡುತಿದ್ದಾರೆ. ಇಂಥಹ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆಗೆ ಬೇಡ. ಅವರನ್ನು ತಕ್ಷಣ ವರ್ಗಾವಣೆಗೊಳಿಸಬೇಕೆಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದಿದೆ. ಟೋಲ್‌ಸಂಗ್ರಹ ಕುರಿತಂತೆ ಸಾರ್ವಜನಿಕ ಹಿತಾಸಕ್ತಿಯ ವಿರುದ್ಧ ಡಿಸಿಯವರು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸಭೆಯಲ್ಲಿ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳಿಂದ ಜಿಲ್ಲಾಧಿಕಾರಿಯ ವಿರುದ್ಧ ವ್ಯಾಕ ಆಕ್ರೋಶ ವ್ಯಕ್ತಪಡಿಸಿದರು.

   ಮಾಜಿ ಶಾಸಕ ಲಾಲಾಜಿ ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಹೋರಾಟಗಾರರ ನೇತೃತ್ವ ವಹಿಸಿರುವ ಗುಲಾಂ ಮುಹಮ್ಮದ್, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಕಾಪು ಪುರಸಭಾ ಉಪಾಧ್ಯಕ್ಷ ಉಸ್ಮಾನ್ ಕಾಪು, ಕಾಪು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿವಾಕರ ಶೆಟ್ಟಿ, ಕಾಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಗೀತಾಂಜಲಿ ಸುವರ್ಣ, ಕೆನರಾ ಬಸ್ಸು ಮಾಲಕರ ಸಂಘದ ಉಪಾಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಲಾರಿ ಮಾಲಕರ ಸಂಘದ ಮುಸ್ತಫಾ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ದಮಯಂತಿ ಅಮೀನ್, ವಿಶಾಲಾಕ್ಷಿ ಪುತ್ರನ್, ಜಿತೇಂದ್ರ ಫುರ್ಟಾಡೋ, ಡೇವಿಡ್ ಡಿಸೋಜಾ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನೀತಾ ಗುರುರಾಜ್, ರೇಣುಕಾ ಪುತ್ರನ್, ಶೇಖಬ್ಬ, ರಾಜೇಶ್ ಪಾಂಗಾಳ, ಕಾರು ಮಾಲಕ ಚಾಲಕರ ಸಂಘದ ರವಿ ಶೆಟ್ಟಿ ಮತ್ತು ದೇವಣ್ಣ, ರಿಕ್ಷಾ ಚಾಲಕ ಮಾಲಕ ಸಂಘದ ಹರೀಶ್ ಶೆಟ್ಟಿ, ದೀಪಕ್ ಎರ್ಮಾಳ್, ಸುಧೀರ್ ಕರ್ಕೇರ, ಎಸ್‌ಡಿಪಿಐನ ನಜೀರ್, ಅಬ್ದುಲ್ ಅಝೀರ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News