×
Ad

ಲಯನ್ಸ್‌ನಿಂದ 1.5ಕೋಟಿ ಮೊತ್ತದ ಸೇವಾ ಕಾರ್ಯ: ದಿವಾಕರ ಶೆಟ್ಟಿ

Update: 2017-02-12 20:37 IST

ಉಡುಪಿ, ಫೆ.12: ಲಯನ್ಸ್ ಜಿಲ್ಲಾ 317 ಸಿ ವತಿಯಿಂದ ಕಳೆದ ಒಂದು ವರ್ಷಗಳಲ್ಲಿ ಒಂದೂವರೆ ಕೋಟಿ ರೂ. ಅಧಿಕ ಮೊತ್ತದ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗಿದೆ ಎಂದು ಜಿಲ್ಲಾ ಗವರ್ನರ್ ಬಿ.ದಿವಾಕರ್ ಶೆಟ್ಟಿ ತಿಳಿಸಿದ್ದಾರೆ.

 ಮಲ್ಪೆ ಲಯನ್ಸ್ ಕ್ಲಬ್‌ಗೆ ರವಿವಾರ ಅಧಿಕೃತ ಭೇಟಿ ನೀಡಿದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಭಾರತ ಸರಕಾರದೊಂದಿಗೆ ಕೈಜೋಡಿಸಿ ಜಿಲ್ಲೆಯಲ್ಲಿ 1.20ಲಕ್ಷ ಮಕ್ಕಳಿಗೆ ದಡಾರ ಹಾಗೂ ರುಬೆಲ್ಲಾ ಲಸಿಕೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದೇವೆ. 2020ರ ವೇಳೆಗೆ ದೇಶದ 40ಕೋಟಿ ಮಕ್ಕಳಿಗೆ ಈ ಲಸಿಕೆಯನ್ನು ನೀಡುವ ಗುರಿಯೊಂದಿಗೆ ಪಾಲುದಾರರಾಗಲಿದ್ದೇವೆ ಎಂದರು.

ಮಲ್ಪೆ ಲಯನ್ಸ್‌ನಿಂದ 100 ಬೀದಿ ವ್ಯಾಪಾರಿಗಳಿಗೆ ಕೊಡೆಗಳನ್ನು ವಿತರಿಸ ಲಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 1000 ಕೊಡೆ ನೀಡಲಾಗಿದೆ. ಇನ್ನು 3000 ಬೀದಿ ವ್ಯಾಪಾರಿಗಳಿಗೆ ಕೊಡೆಯನ್ನು ನೀಡಲಾಗುವುದು. ಈ ಬಾರಿ 3000 ಸದಸ್ಯತ್ವ ನೋಂದಾಯಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.

ಗವರ್ನರ್ ಭೇಟಿಯ ಹಿನ್ನೆಲೆಯಲ್ಲಿ ಮಲ್ಪೆ ಲಯನ್ಸ್ ವತಿಯಿಂದ ಇಂದು ಕಡೆಕಾರಿನಲ್ಲಿ ಬಸ್ ನಿಲ್ದಾಣ ನಿರ್ಮಾಣ, ಕಡೆಕಾರ್ ಬೀಚ್‌ನಲ್ಲಿ ಬೆಂಚ್ ನಿರ್ಮಾಣ, ಮಲ್ಪೆ ಶಾಲೆಗೆ ಕೊಡುಗೆಯನ್ನು ನೀಡಲಾಯಿತು. ಅದೇ ರೀತಿ ವಿವಿಧ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಪೆ ಲಯನ್ಸ್ ಅಧ್ಯಕ್ಷೆ ಗಿರಿಜಾ ತಲ್ಲೂರು, ಉಪ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ, ಮಲ್ಪೆ ಕಾರ್ಯದರ್ಶಿ ವಿಜಯ ಬಂಗೇರ, ಕ್ಯಾಬಿನೆಟ್ ಕಾರ್ಯದರ್ಶಿ ಸುನೀಲ್ ಕೋಟ್ಯಾನ್, ವಲಯ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News