ಪಿಯುಸಿ ಪಠ್ಯಕ್ರಮದಲ್ಲಿ ಕೊಂಕಣಿ ಭಾಷೆ: ಐವನ್ ಇಂಗಿತ

Update: 2017-02-12 16:57 GMT

ಮಂಗಳೂರು, ಫೆ. 12: ಪಿಯುಸಿ ಪಠ್ಯಕ್ರಮದಲ್ಲಿ ಕೊಂಕಣಿ ಭಾಷೆ ಅಳವಡಿಸುವ ಇಂಗಿತವನ್ನು ವ್ಯಕ್ತಪಡಿಸಿರುವ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿದ ಮೂರು ದಿನಗಳ ಕೊಂಕಣಿ ಲೋಕೋತ್ಸವ ಸಮಾರೋಪ ಹಾಗೂ ಅಕಾಡಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವಿವಾರ ಭಾಗವಹಿಸಿ ಅವರು ಮಾತನಾಡಿದರು.

ಕೊಂಕಣಿ ಭಾಷೆ ಸಂವಿಧಾನದ 8ನೆ ಪರಿಚ್ಛೇದದಲ್ಲಿ ಸೇರಿದೆ. ಈ ಭಾಷೆ ಪಿಯುಸಿ ಪಠ್ಯಕ್ರಮದಲ್ಲಿ ಸೇರಿಸಿ ವಿದ್ಯಾರ್ಥಿಗಳಿಗೆ ಕೊಂಕಣಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು. ಮುಂದಿನ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಯವರಲ್ಲಿ ಈ ಬಗ್ಗೆ ಪ್ರಸ್ತಾಪವನ್ನಿಟ್ಟು ಮುಂದಿನ ವರ್ಷದಿಂದಲೇ ಜಾರಿಯಾಗಲು ಒತ್ತಾಯಿಸುವುದಾಗಿ ಹೇಳಿದರು.

ಶಿಕ್ಷಣಿ, ಸಾಹಿತ್ಯ ಮತ್ತು ಸಾಂಸ್ಕೃತಿ ಕ್ಷೇತ್ರದಲ್ಲಿ ಕೊಂಕಣಿಗರು ನೀಡಿರುವ ಕೊಡುಗೆ ಅಪಾರವಾಗಿದೆ. ಕೊಂಕಣಿ ಭಾಷೆ ಸಮೃದ್ಧದ ಸಂಕೇತವಾಗಿದ್ದು, ಈ ಭಾಷೆಯ ಅಭಿವೃದ್ಧಿ ಅಗತ್ಯವಾಗಿದೆ ಎಂದು ಐವನ್ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಅಕಾಡಮಿಯ ವತಿಯಿಂದ ಕಳೆದ ಮೂರು ವರ್ಷಗಳಲ್ಲಿ 75 ಪುಸ್ತಕಗಳನ್ನು ಪ್ರಕಟಿಸಲಾಗಿದೆ. 250ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊಂಕಣಿ ತೃತೀಯ ಭಾಷೆಯಾಗಿ ಸರಕಾರ ಮಾನ್ಯತೆ ನೀಡಿದೆ. ಆದ್ದರಿಂದ ಪಿಯುಸಿಯಲ್ಲಿ ಕೊಂಕಣಿ ಅಧ್ಯಯನಕ್ಕೆ ಅವಕಾಶ ನೀಡಬೇಕಾಗಿದೆ ಎಂದರು.

 ವೇದಿಕೆಯಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಗುರು ರೆ.ಫಾ.ಡೆನಿಸ್ ಮೊರಾಸ್, ಶಾಸಕ ಬಿ.ಎ.ಮೊದಿನ್ ಬಾವ, ತುಳು ಅಕಾಡಮಿಯ ಅಧ್ಯಕ್ಷ ಎಂ.ಜಾನಕಿ ಬ್ರಹ್ಮಾವರ, ಅಕಾಡಮಿಯ ರಿಜಿಸ್ಟ್ರಾರ್ ಡಾ.ಬಿ.ದೇವದಾಸ್ ಪೈ, ಕೊಂಕಣಿ ಹಿರಿಯ ಮುಖಂಡ ಡಾ.ಸಿ.ಎನ್.ಶೆಣೈ, ಬ್ಯಾಂಕಿಂಗ್ ಧುರೀಣ ಜಾನ್ ಡಿಸಿಲ್ವ, ಮೈಸೂರು ಜಿಎಸ್‌ಬಿ ಸಭಾದ ಗೌರವಾಧ್ಯಕ್ಷ ಜಗನ್ನಾಥ ಶೆಣೈ, ಉಪಸ್ಥಿತರಿದ್ದರು.

ಗೌರವ ಪ್ರಶಸ್ತಿ ಪ್ರದಾನ

ಇದೇ ಸಂದರ್ಭದಲ್ಲಿ ಅಕಾಡಮಿಯ 2016ನೆ ಸಾಲಿನ ಗೌರವ ಪ್ರಶಸ್ತಿ ಪ್ರದಾನ ನಡೆಯಿತು.

ಸಿರಿಲ್ ಜಿ. ಸಿಕ್ವೇರಾ (ಸಾಹಿತ್ಯ), ವಾಸುದೇವ ಶಾನುಭಾಗ್ (ಕಲಾ), ಕ್ಲಾರಾ ಸಿದ್ಧಿ (ಜಾನಪದ) ಗೌರವ ಪ್ರಶಸ್ತಿ ಪಡೆದುಕೊಂಡರು. ಪುಸ್ತಕ ಬಹುಮಾನವನ್ನು ಕಾಸರಗೋಡು ಚಿನ್ನಾ (ಭಾಷಾಂತರ), ಉಮೇಶ್ ನಾಯಕ್ (ಕಾವ್ಯ), ಸಿ.ಆಗ್ನೇಸಿಯಾ ಫ್ರಾಂಕ್ (ಅಧ್ಯಯನ) ಅವರಿಗೆ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News