×
Ad

ಕ್ಯಾಲಿಫೋರ್ನಿಯಾದ ಒರೊವಿಲ್ಲೆ ಜಲಾಶಯ ಕುಸಿಯುವ ಭೀತಿ; ಲಕ್ಷಾಂತರ ಜನರ ಸ್ಥಳಾಂತರ

Update: 2017-02-13 12:48 IST

ಕ್ಯಾಲಿಫೋರ್ನಿಯಾ, ಫೆ.13: ಅಮೆರಿಕಾದ ಕ್ಯಾಲಿಫೋರ್ನಿಯಾ ನಗರದಲ್ಲಿರುವ ದೇಶದ ಅತ್ಯಂತ ಎತ್ತರದ ಒರೊವಿಲ್ಲೆ ಜಲಾಶಯ ಕುಸಿಯುವ ಅಪಾಯವೆದುರಿಸುತ್ತಿರುವುದರಿಂದ ಜಲಾಶಯದ ಸಮೀಪದ ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಕನಿಷ್ಠ 1.3 ಲಕ್ಷ ಜನರನ್ನು ಸ್ಥಳದಿಂದ ಸ್ಥಳಾಂತರಿಸಲಾಗುತ್ತಿದೆ. ಜಲಾಶಯದ ತುರ್ತುದ್ವಾರವೊಂದರಲ್ಲಿ ಕಂಡು ಬಂದಿರುವ ತೋತೊಂದರಿಂದ ನೀರು ಹೊರಬರಲಾಂಭಿಸಿದ್ದು ಕ್ಯಾಲಿಫೋರ್ನಿಯಾದ ಜಲಸಂಪನ್ಮೂಲ ಇಲಾಖೆ ಮಧ್ಯರಾತ್ರಿಗೆ ತನ್ನ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಒಂದನ್ನು ಮಾಡಿ ಇನ್ನೊಂದು ಗಂಟೆಯಲ್ಲಿ ದ್ವಾರ ಕುಸಿಯುವ ಸಾಧ್ಯತೆಯಿದೆಯೆಂದು ಹೇಳಿದೆ.

ತರುವಾಯ ಹೆಲಿಕಾಪ್ಟರ್ ಮುಖಾಂತರ ಬಂಡೆಕಲ್ಲುಗಳನ್ನು ಕೆಳಕ್ಕೆ ಬೀಳಿಸಿ ದ್ವಾರದಲ್ಲಿ ಕಂಡು ಬಂದಿರುವ ತೂತನ್ನು ಮುಚ್ಚಲು ಪ್ರಯತ್ನಿಸಲಾಗುವುದು ಎಂದು ಇಲಾಖೆ ಹೇಳಿದೆ. ಅಧಿಕಾರಿಗಳು ಜಲಾಶಯದಲ್ಲಿರುವ ನೀರನ್ನು ಕಡಿಮೆಗೊಳಿಸುವ ಸಲುವಾಗಿ ನೀರನ್ನು ಹೊರಕ್ಕೆ ಬಿಡುತ್ತಿದ್ದಾರೆ.

ಒರೊವಿಲ್ಲೆ, ಗ್ರಿಡ್ಲೆ, ಲೈವ್ ಓಕ್, ಮೇರಿಸ್‌ವಿಲ್ಲೆ, ವೀಟ್ ಲ್ಯಾಂಡ್, ಯುಬಾ ಸಿಟಿ, ಪ್ಲುಮಾಸ್ ಲೇಕ್ ಹಾಗೂ ಒಲಿವ್ ಹಸ್ಟ್ ಇಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಕಳೆದ ಶುಕ್ರವಾರ ಈ ಜಲಾಶಯದ ನೀರಿನ ಮಟ್ಟ 273 ಮೀಟರಿನಷ್ಟಿತ್ತು. ಇದು ಜಲಾಶಯದ ಒಟ್ಟು ಎತ್ತರಕ್ಕಿಂತ ಕೇವಲ ಎರಡು ಮೀಟರ್ ಕಡಿಮೆ ಇದೆಯೆಂದು ಜಲಸಂಪನ್ಮೂಲ ಇಲಾಖೆ ಹೇಳಿದೆ.

ಒರೋವಿಲ್ಲೆಗಿಂತ ಸುಮಾರು 20 ಮೈಲು ದೂರದಲ್ಲಿರುವ ಚಿಕೊದಲ್ಲಿ ಸ್ಥಳಾಂತರಿಸಲ್ಪಟ್ಟ ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಸ್ಥಳಕ್ಕೆ ಹೋಗುವ ದಾರಿಗಳೆಲ್ಲವೂ ವಾಹನಗಳಿಂದ ಕಿಕ್ಕಿರಿದಿದ್ದು ಹೆಚ್ಚಿನ ಜನರು ತಮ್ಮ ವಾಹನಗಳಲ್ಲಿಯೇ ಅಪಾಯವಿರುವ ಸ್ಥಳಗಳಿಂದ ಹೊರಟು ಬಂದಿದ್ದಾರೆ.

ನೀರು ಪೂರೈಕೆ, ಜಲವಿದ್ಯುತ್ ಉತ್ಪಾದನೆ ಹಾಗೂ ನೆರೆ ನಿಯಂತ್ರಣದಲ್ಲಿ ಈ ಜಲಾಶಯ ಮಹತ್ತರ ಪಾತ್ರ ವಹಿಸುತ್ತಿದ್ದು ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಜಲಾಶಯದ ನೀರಿನ ಮಟ್ಟ ಅದರ ಸಾಮರ್ಥ್ಯಕ್ಕಿಂತ ಏರಿದ್ದರಿಂದ ತುರ್ತುದ್ವಾರವನ್ನು ತೆರೆಯಲಾಗಿತ್ತು.

1962 ಹಾಗೂ 1968ರ ನಡುವೆ ನಿರ್ಮಿಸಲ್ಪಟ್ಟ ಈ ಜಲಾಶಯ ಖ್ಯಾತ ಹೂವರ್ ಜಲಾಶಯಕ್ಕಿಂತಲೂ 12 ಮೀಟರ್ ಎತ್ತರವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News