ಅಬುಧಾಬಿಯ ಮನೆಯಲ್ಲಿ ಗಾಂಜಾ ಗಿಡ ಬೆಳೆಸುತ್ತಿದ್ದ ಯುವಕನ ಬಂಧನ
ದುಬೈ, ಫೆ.13: ತನ್ನ ಅಬುಧಾಬಿ ನಿವಾಸದಲ್ಲಿ ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದ 28 ವರ್ಷದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ಏಷ್ಯಾ ಮೂಲದವನಾಗಿದ್ದು ತನ್ನ ಮನೆಯಲ್ಲಿ ಗಾಂಜಾ ಬೆಳೆಗಳಿಗೆ ಅನುಕೂಲಕರವಾಗಿರುವ ಮಣ್ಣು, ಬೆಳಕು ಹಾಗೂ ನಿಯಂತ್ರಿತ ತಾಪಮಾನವಿರುವಂತೆ ನೋಡಿಕೊಂಡಿದ್ದನೆಂದು ಅಬುಧಾಬಿ ಪೊಲೀಸರ ಸಿಐಡಿ ನಿರ್ದೇಶಕರಾದ ಬ್ರಿಗೇಡಿಯರ್ ಜನರಲ್ ಡಾ. ರಶೀದ್ ಹೇಳಿದ್ದಾರೆ.
ಈತನ ಬಗ್ಗೆ ಸ್ವಲ್ಪ ಸಮಯದ ಹಿಂದೆಯೇ ಮಾಹಿತಿ ಪಡೆದಿದ್ದ ಪೊಲೀಸರು ಆತನ ಚಲನವಲನದ ಮೇಲೆ ನಿಗಾವಹಿಸಿದ್ದು ಕೊನೆಗೊಂದು ದಿನ ಆತ ಸುಮಾರು ಅರ್ಧ ಕೆಜಿ ತೂಕದ ಗಿಡಗಳನ್ನು ಮಾರಾಟ ಮಾಡಲೆತ್ನಿಸುತ್ತಿದ್ದಾಗ ಬಂಧಿಸಿದ್ದಾರೆ. ಆತನ ಬಳಿ 600 ಗ್ರಾಂಕ್ಕಿಂತಲೂ ಅಧಿಕ ಮರಿಜುವಾನ ಪತ್ತೆಯಾಗಿದ್ದು ದೊಡ್ಡ ಪ್ರಮಾಣದ ಬೀಜಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಕಳೆದ ವರ್ಷ ತನ್ನ ದುಬೈ ವಿಲ್ಲಾದಲ್ಲಿ 38 ಮರಿಜುವಾನ ಗಿಡಗಳನ್ನು ಸಾಕಿದ್ದ ಎಮಿರೇಟ್ ವ್ಯಕ್ತಿಯೊಬ್ಬನಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತಲ್ಲದೆ 50,000 ದಿರಮ್ ದಂಡ ಕೂಡ ವಿಧಿಸಲಾಗಿತ್ತು.