ಸ್ಟೇಟ್‌ಬ್ಯಾಂಕ್-ರಾವ್ ಆ್ಯಂಡ್ ರಾವ್ ಸರ್ಕಲ್: ಗೂಡಂಗಡಿಗಳ ತೆರವು
ಮಂಗಳೂರು, ಫೆ.13: ನಗರದ ಸ್ಟೇಟ್‌ಬ್ಯಾಂಕ್-ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಅಕ್ರಮ ಗೂಡಂಗಡಿಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸೋಮವಾರ ಬೆಳಗ್ಗೆ ತೆರವುಗೊಳಿಸಿದ್ದಾರೆ.
ಮನಪಾ ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಜೆಸಿಬಿ ಬಳಸಿಕೊಂಡು ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಮುಂದಾದರು. ಈ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಂಡಿದ್ದ ಕೆಲವು ಮಂದಿ ವ್ಯಾಪಾರಕ್ಕೆ ಬಳಸುವ ಸಲಕರಣೆಗಳನ್ನು ತಕ್ಷಣ ಬೇರೆಕಡೆ ಸಾಗಿಸಿದರು. ಆದರೂ ಮನಪಾ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆ ನಡೆಸಿ ಎರಡೂ ಕಡೆಯ ರಸ್ತೆಯ ಬದಿ ಅಕ್ರಮವಾಗಿಟ್ಟಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿದರು.
ಸುಮಾರು 15 ವರ್ಷದಿಂದ ನಗರದ ಪ್ರಮುಖ ರಸ್ತೆಗಳ ಇಕ್ಕಡೆಗಳಲ್ಲಿ ಬೀದಿಬದಿ ವ್ಯಾಪಾರ ಬಿರುಸಿನಿಂದಲೇ ನಡೆಯುತ್ತಿದೆ. ಈ ಮಧ್ಯೆ ಮನಪಾ ಆಡಳಿತವು ಆಗಾಗ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಲೇ ಇದೆ. ಇದನ್ನು ಖಂಡಿಸಿ ಬೀದಿಬದಿ ವ್ಯಾಪಾರಿಗಳು ಹೋರಾಟ, ಪ್ರತಿಭಟನೆ, ರಸ್ತೆ ತಡೆ, ಮುತ್ತಿಗೆ, ಧರಣಿ ಇತ್ಯಾದಿ ನಡೆಸಿ ಗಮನ ನಡೆಸಿದ್ದರು. ತನ್ಮಧ್ಯೆ ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ ಕೆಲವು ಪಕ್ಷ-ಸಂಘಟನೆಗಳು ಮುಂದಾಗಿದ್ದವು. ಅಲ್ಲದೆ ಸಮಿತಿಯನ್ನೂ ರಚಿಸಿದ್ದವು.
ಸತತ ಹೋರಾಟಗಳ ಫಲವಾಗಿ ಮನಪಾ ಆಡಳಿತವು ಇತ್ತೀಚೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಲೇಡಿಗೋಶನ್ ಆಸ್ಪತ್ರೆ ಎದುರಿನ ಟೆಂಪೋಸ್ಟಾಂಡ್ ಬಳಿ ಬೀದಿ ಬದಿ ವ್ಯಾಪಾರಿ ವಲಯ ಸ್ಥಾಪಿಸಿತ್ತು. ಅದಕ್ಕಾಗಿ ಮನಪಾವು ಗುರುತಿನ ಚೀಟಿಯನ್ನೂ ವಿತರಿಸಿತ್ತು. ಹಾಗೇ ಕೆಲವು ದಿನ ಇಲ್ಲಿ ವ್ಯಾಪಾರ ನಡೆಸಿದ್ದವರ ಪೈಕಿ ಹೆಚ್ಚಿನವರು ವ್ಯಾಪಾರ ಕಡಿಮೆಯಾಗುತ್ತಿದೆ ಎಂಬ ನೆಪವೊಡ್ಡಿ ಮತ್ತೆ ರಸ್ತೆಗೆ ಇಳಿದಿದ್ದರು. ಇದರ ವಿರುದ್ಧ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮನಪಾ ಕಾರ್ಯಾಚರಣೆ ನಡೆಸಿ ಮತ್ತೆ ಗಮನಸೆಳೆದಿದೆ.