ಮೋದಿ ಸೋಲು ಖಚಿತ-ಇಲ್ಲದಿದ್ದರೆ ರಾಜಕೀಯ ನಿವೃತ್ತಿ: ಜನಾರ್ದನ ಪೂಜಾರಿ
ಮಂಗಳೂರು,ಫೆ.13: ದೇಶದಲ್ಲಿ ನೋಟು ನಿಷೇಧದ ಬಳಿಕ ಬಳಿಕ ಉಂಟಾಗಿರುವ ಸಮಸ್ಯೆಯಿಂದ ಮತ್ತು ಜನತೆಗೆ ನೀಡಿದ ಆಶ್ವಾಸನೆಯನ್ನು ಮರೆತು ಆಡಳಿತ ನಡೆಸುವ ರೀತಿಯಿಂದ ಮುಂದಿನ ಚುನಾವಣೆಯಲ್ಲಿ ಮೋದಿ ನೇತೃತ್ವದ ಪಕ್ಷ ವನ್ನು ಜನರೇ ಸೋಲಿಸುತ್ತಾರೆ.ಇಲ್ಲದಿದ್ದರೆ ನಾನು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮೋದಿ ಅಧಿಕಾರಕ್ಕೆ ಏರುವ ಮೊದಲು ದೇಶದ ಜನರಿಗೆ ಹಲವು ಭರವಸೆ ನೀಡಿದ್ದಾರೆ.ಪಾಕಿಸ್ತಾನವನ್ನು ದಂಗು ಬಡಿಸುವ ಹೇಳಿಕೆ ನೀಡಿದ್ದಾರೆ.ಆದರೆ ಆ ರೀತಿಯ ಯಾವ ಭರವಸೆಯೂ ಈಡೇರಿಕೆಯಾಗಿಲ್ಲ.ಉಗ್ರರನ್ನು ಬಂಧಿಸಿ ಅವರನ್ನು ಗಡಿಪಾರು ಮಾಡುವ ಕೆಲಸವೂ ಆಗಿಲ್ಲ .1000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಸರಕಾರ ನಿಷೇಧಿಸಿದ ಬಳಿಕ ಎಷ್ಟು ಕಪ್ಪು ಹಣ ಸರಕಾರ ಪತ್ತೆ ಹಚ್ಚಲು ಸಾಧ್ಯವಾಗಿದೆ ಎನ್ನುವುದನ್ನು ಮೊದಲು ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ. ಬಡವರು ಬಂದು ಬೀದಿಯಲ್ಲಿ ತಮ್ಮ ಕೆಲಸ ಬಿಟ್ಟು ಎಟಿಎಂ ಮುಂದೆ ಸಾಲು ನಿಲ್ಲುವಂತಾಯಿತು.ದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿದ ಪ್ರಧಾನಿಗಳು ಯಾರೂ ಈ ರೀತಿ ನಡೆದುಕೊಂಡಿಲ್ಲ.ತಮ್ಮ ಘನತೆಯನ್ನು ಕಾಯ್ದುಕೊಂಡಿದ್ದಾರೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಕಂಬಳವನ್ನು ಉಳಿಸಿಕೊಳ್ಳಲು ರಾಜ್ಯ ಸರಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ: ಕಂಬಳವನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ .ಕಂಬಳ ನಡೆಸುವವರು ನಾವು ಕೋಣಗಳಿಗೆ ಹಿಂಸೆ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.ಆ ಪ್ರಕಾರ ಅವರು ನಡೆದುಕೊಳ್ಳಲಿ.ತಮಿಳುನಾಡಿನ ಜಲ್ಲಿಕಟ್ಟು ಹೇಗೆ ಸಂಪ್ರದಾಯವಾಗಿದೆಯೋ ಹಾಗೆ ಕಂಬಳ ಈ ರಾಷ್ಟ್ರ ಒಂದು ಸಂಸ್ಕೃತಿಯ ಭಾಗವಾಗಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ದರಾಮಯ್ಯರ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ದಾಖಲೆಗಳನ್ನು ಒದಗಿಸಲಿ.ಯಡಿಯೂರಪ್ಪ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎನ್ನುವ ಆರೋಪಕ್ಕೆ ಅವರು ಉತ್ತರ ನೀಡಲಿ.ಕಾಂಗ್ರೆಸ್ಸಿನ ಹಿರಿಯ ಮುಖಂಡರಲ್ಲಿ ಜನಾರ್ದನ ಪೂಜಾರಿ ಸಹಿತ ಹಲವರ ವಿರುದ್ಧ ಹೈಕಮಾಂಡ್ ಯಾವುದೇ ಕ್ರಮ ಕೈ ಗೊಳ್ಳಲು ಮುಂದಾದರೂ ನಾನು ಹೆದರುವುದಿಲ್ಲ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಪತ್ರಕರ್ತರ ನಿಧನಕ್ಕೆ ಸಂತಾಪ ಸೂಚಿಸಿದ ಜನಾರ್ದನ ಪೂಜಾರಿಯಿಂದ ಕುಟುಂಬಕ್ಕೆ ತಮ್ಮ ಪಿಂಚಣೆ ಹಣದಿಂದ ಆರ್ಥಿಕ ನೆರವು: ಸುಳ್ಯದ ಪತ್ರಕರ್ತ ಚೇತನ್ ರಾಂ ಇರಂತಕಜೆ ಅವರ ನಿಧನರಾಗಿದ್ದು ಈ ಬಗ್ಗೆ ಹಮ್ಮಿಕೊಂಡಿದ್ದ ಸಂತಾಪ ಸಭೆಗೆ ಆಗಮಿಸಿದ ಜನಾರ್ದನ ಪೂಜಾರಿಯವರು ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು . ಚೇತನ್ ರಾಮ್ ಅವರ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ತಿಳಿದುಕೊಂಡ ಜನಾರ್ದನ ಪೂಜಾರಿಯವರು ಅವರ ಮಕ್ಕಳ ಶಿಕ್ಷಣ ಅರ್ಧದಲ್ಲಿ ನಿಂತು ಹೋಗಬಾರದು ಎಂದು ತಮ್ಮ ಮಾಸಿಕ ಪಿಂಚಣಿಯಲ್ಲಿ ರೂ. 50ಸಾವಿರ ಮೊತ್ತವನ್ನು ಆ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ಮಾಜಿ ಮೇಯರ್ ಪುರಂದರದಾಸ ಕೂಳೂರು ಮೊದಲಾದವರು ಉಪಸ್ಥಿತರಿದ್ದರು.