×
Ad

ನಿವೇಶನಕ್ಕೆ ಆಗ್ರಹಿಸಿ ಮನಾಪ ಕಚೇರಿಗೆ ಸಿಪಿಐಎಂ ಮುತ್ತಿಗೆ

Update: 2017-02-13 15:53 IST

ಮಂಗಳೂರು, ಫೆ. 13: ನಿವೇಶನರಹಿತರ ಹೋರಾಟ ಸಮಿತಿ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ನಡೆಸಿದ ಫಲವಾಗಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2 ಸಾವಿರ ಅರ್ಜಿದಾರರನ್ನು ಆಯ್ಕೆ ಮಾಡಲಾಗಿದೆ. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕರು ಸ್ಥಳೀಯ ಕಾರ್ಪೊರೇಟರ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಿದ್ಧಪಡಿಸಿದ ಕಾರಣದಿಂದಲೇ ಅನರ್ಹರನ್ನು ಆಯ್ಕೆಯಾಗಿದೆ ಎಂದು ಸಿಪಿಎಂ ಮನಪಾ ಸದಸ್ಯ ದಯಾನಂದ ಶೆಟ್ಟಿ ಆರೋಪಿಸಿದ್ದಾರೆ.

ಅವರು ನಿವೇಶನರತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸುರತ್ಕಲ್ ಮನಪಾ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಭೆಯನ್ನು ಉದ್ದೇಶಿಸಿ ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ಶಾಸಕ ಮೊದಿನ್‌ಬಾವಾ ಅವರು ಕೇವಲ ಶಂಕು ಸ್ಥಾಪನೆಗಾಗಿ ಸೀಮಿತರಾಗಿದ್ದಾರೆ. ಆದರೆ ಬಡವರ ಪರವಾದ ಆಶ್ರಯ ಯೋಜನೆಯ ಶಂಕು ಸ್ಥಾಪನೆ ಮಾಡಲು ಅವರಿಗೆ ಸಮಯ ಸಿಗುತ್ತಿಲ್ಲ. ಇದು ಅವರ ಬಡವರ ಕಾಳಜಿ ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

ನಿವೇಶನರಹಿತರ ಹೋರಾಟ ಸಮಿತಿಯ ಕಾನೂನು ಸಲಹೆಗಾರರು, ಸಿಪಿಎಂ ಪಕ್ಷದ ಉತ್ತರ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು, ವಿಧವೆಯಾಗಿರುವ ಅರ್ಜಿದಾರರನ್ನು ಆಯ್ಕೆ ಮಾಡದೇ ಸರಕಾರದ ಸುತ್ತೋಲೆಗಳನ್ನು ಬದಿಗಿಟ್ಟು ಅನರ್ಹರನ್ನು ಆಯ್ಕೆ ಮಾಡಲಾಗಿದೆ. ಇಂತಹ ಲೋಪದೋಷಗಳನ್ನು ಶೀಘ್ರ ಸರಿಪಡಿಸಲು ನಿವೇಶನರಹಿತರ ಹೋರಾಟ ಸಮಿತಿಯ ಜೊತೆ ದ್ವಿಪಕ್ಷೀಯ ದಿನ ನಿಗದಿಪಡಿಸಬೇಕು. ಮುಂದಿನ ದಿನಗಳಲ್ಲಿ ಪಟ್ಟಿಯಲ್ಲಿರುವ ದೋಷಗಳನ್ನು, ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು. ಇದರಿಂದ ಆಗುವ ಎಲ್ಲಾ ತೊಂದರೆಗಳಿಗೆ ಹೋರಾಟ ಸಮಿತಿ ಹೊಣೆಯಲ್ಲ ಎಂದು ಎಚ್ಚರಿಕೆ ನೀಡಿದರು.

ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶಕ್ತಿನಗರ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಪ್ರಮುಖ 7 ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮಾರ್ಚ್ ತಿಂಗಳಲ್ಲಿ ತೀವ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹೋರಾಟ ಸ್ಥಳಕ್ಕೆ ಶಾಸಕರ ಆಪ್ತ ಸಹಾಯಕರು ಬಂದು ಮನವಿಯನ್ನು ಸ್ವೀಕರಿಸಿದರು. ನಿವೇಶನರಹಿಹತರ ಹೋರಾಟ ಸಮಿತಿಯ ಅಧ್ಯಕ್ಷ ಪ್ರೇಮನಾಥ್ ಜಲ್ಲಿಗುಡ್ಡೆ, ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಹೋರಾಟ ಸಮಿತಿಯ ಖಜಾಂಚಿ ಪ್ರಭಾವತಿ ಬೋಳೂರು ವಂದಿಸಿದರು. ಹೋರಾಟದ ನೇತೃತ್ವವನ್ನು ಮಂಜುಳಾ ಶೆಟ್ಟಿ, ನೂತನ್ ಕೊಂಚಾಡಿ, ಪೂರ್ಣಿಮಾ, ರೋಹಿಣಿ, ಸೌಮ್ಯಾ, ಅನಿಲ್, ಭವಾನಿ ಬೊಲ್ಯ, ಹೇಮಾ, ಉಮಾಶಂಕರ್, ಅಶೋಕ್ ಶ್ರೀಯಾನ್, ಮನೋಜ್, ನಾಗೇಶ್ ಕೋಟ್ಯಾನ್ ವಹಿಸಿದ್ದರು.

ಸಭೆಗೆ ಮೊದಲು ಸುರತ್ಕಲ್ ಮಾರ್ಕೆಟ್‌ನಿಂದ 500ಕ್ಕೂ ಹೆಚ್ಚು ನಿವೇಶನರಹಿತರು ಮೆರವಣಿಗೆಯಲ್ಲಿ ಭಾಗವಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News